ADVERTISEMENT

ನನ್ನೊಂದಿಗೆ ಚರ್ಚಿಸಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 5:04 IST
Last Updated 29 ಜೂನ್ 2021, 5:04 IST
   

ಬೆಂಗಳೂರು: ಶಿಕ್ಷಣ ಸಚಿವ ಎಸ್. ಸುರೆಶ್ ಕುಮಾರ್ ಅವರು ಪೂರ್ವಭಾವಿಯಾಗಿ ನನ್ನೊಂದಿಗೆ ಚರ್ಚಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದ ನಂತರವೇ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದು ಏಕಪಕ್ಷೀಯ ತೀರ್ಮಾನವಲ್ಲ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಅನಗತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಬಗ್ಗೆ ಆರೋಗ್ಯ ಇಲಾಖೆ ಜೊತೆ ಚರ್ಚೆ ನಡೆಸಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿತ್ತು. ಇದೀಗ, ಈ ಬಗ್ಗೆ ಸ್ವತಃ ಸಿಎಂ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ಆರೋಗ್ಯ ಇಲಾಖೆಯ ಸಲಹೆಯಂತೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ದಿನಗಳನ್ನು ಪ್ರಕಟಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ತಿಳಿಸಿದ್ದರು.. ‘ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಸಮ್ಮುಖದಲ್ಲಿ‌ ಸೋಮವಾರ ಸಭೆ‌ ನಡೆಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಪ್ರಮಾಣಿತ ಕಾರ್ಯಚರಣಾ ವಿಧಾನಗಳ (ಎಸ್ಒಪಿ) ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ’ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.