ADVERTISEMENT

ಆಂಧ್ರ ಸರ್ಕಾರದ ತೆಲುಗು ಕಡ್ಡಾಯ ಕಲಿಕೆ ನಿರ್ಧಾರಕ್ಕೆ ಸಚಿವ ಸುರೇಶ್ ಕುಮಾರ್ ಆತಂಕ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 11:07 IST
Last Updated 29 ಜನವರಿ 2020, 11:07 IST
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನರೆಡ್ಡಿ
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನರೆಡ್ಡಿ    

ಬೆಂಗಳೂರು: ಇತ್ತೀಚೆಗೆ ಸೀಮಾಂಧ್ರ ಸರ್ಕಾರ ತನ್ನ ರಾಜ್ಯದಲ್ಲಿನ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುವ ಹಾಗೆಯೇ ಪ್ರತಿ ವಿದ್ಯಾರ್ಥಿಯನ್ನು ತೆಲುಗು ಇಲ್ಲವೇ ಉರ್ದು ಭಾಷೆ ಕಲಿಯಬೇಕೆಂಬ ನಿರ್ಧಾರ ಕೈಗೊಂಡಿರುವುದನ್ನು ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಗಡಿಯಲ್ಲಿ ವಾಸಿಸುವ ಕನ್ನಡಿಗರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಸೀಮಾಂಧ್ರದ ಮುಖ್ಯಮಂತ್ರಿ ವೈ.ಎಸ್. ಜಗನ್‌ ಮೋಹನರೆಡ್ಡಿ ಅವರಿಗೆ ಪತ್ರ ಬರೆದಿರುವ ಸಚಿವರು, ಕರ್ನಾಟಕ ಮತ್ತು ಆಂಧ್ರಪದೇಶ ರಾಜ್ಯಗಳ ಸಂಬಂಧ ಐತಿಹಾಸಿಕವಾದುದು. ಕೃಷ್ಣದೇವರಾಯನ ಕಾಲಕ್ಕಿಂತಲೂ ಮೊದಲಿನಿಂದಲೂ ಈ ಎರಡೂ ರಾಜ್ಯಗಳು ಯಾವಾಗಲೂ ಸಹೋದರ ಸಂಬಂಧದಲ್ಲೇ ನಡೆದುಕೊಂಡು ಬರುತ್ತಿವೆ. ಭಾಷೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ನಮ್ಮೆರಡು ರಾಜ್ಯಗಳು ಪರಸ್ಪರ ಸೌಹಾರ್ದದಿಂದಲೇ ಇವೆ. ಇದು ಎರಡೂ ರಾಜ್ಯಗಳಿಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಆಂಧ್ರ ಪ್ರದೇಶ ಸರ್ಕಾರ ಸೀಮಾಂಧ್ರದಲ್ಲಿನ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುವ ಹಾಗೆಯೇ ಪ್ರತಿ ವಿದ್ಯಾರ್ಥಿಯನ್ನು ತೆಲುಗು ಇಲ್ಲವೇ ಉರ್ದು ಭಾಷೆ ಕಲಿಯಬೇಕೆಂಬ ನಿರ್ಧಾರ ಕೈಗೊಂಡಿರುವುದು ನಮ್ಮೆರಡು ರಾಜ್ಯಗಳ ನಡುವಿನ ಸೌಹಾರ್ದಕ್ಕೆ ಧಕ್ಕೆಯಾದಂತಾಗಿದೆ. ಇದು ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರ ಮನೋಸ್ಥೈರ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾಂಸ್ಕೃತಿಕ ಸಂಘರ್ಷ ಇತರೆ ಯಾವುದೇ ಸಾಮಾಜಿಕ ಸಂಘರ್ಷಗಳಿಗಿಂತಲೂ ತೀವ್ರ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ರಾಜ್ಯದ ಉದಾರ ಮತ್ತು ಸಮಗ್ರ ಆಡಳಿತ ಕಾರ್ಯವಿಧಾನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹತ್ತಾರು ತೆಲುಗು ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಆಂಧ್ರಪ್ರದೇಶ ಕೈಗೊಂಡ ನಿರ್ಧಾರ ಕನ್ನಡ ಭಾಷಾ ಶಿಕ್ಷಕರ ಜೀವನವನ್ನು ಅಪಾಯಕ್ಕೆ ಸಿಕ್ಕಿಸುವುದು ಮಾತ್ರವೇ ಅಲ್ಲ, ಕರ್ನಾಟಕ ಹೊರಗೆ ವಾಸಿಸುತ್ತಾರೆಂಬ ಒಂದೇ ಕಾರಣಕ್ಕಾಗಿ ಕನ್ನಡಿಗರ ಮಕ್ಕಳು ತಮ್ಮ ಮಾತೃಭಾಷೆಯಿಂದ ವಂಚಿತವಾಗಬೇಕಾಗುತ್ತದೆ. ಹಾಗಾಗಿ ಕನ್ನಡವನ್ನು ಭಾಷೆಯಾಗಿ ಇಲ್ಲವೇ ಮಾಧ್ಯಮವಾಗಿ ಕಲಿಸುವ ಅಲ್ಪಸಂಖ್ಯಾತ ಭಾಷಾ ಶಾಲೆಗಳನ್ನು ಮುಂದುವರೆಸುವ ಮೂಲಕ ತಮ್ಮ ರಾಜ್ಯದಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.