ADVERTISEMENT

ಪಿಯು ಇಂಗ್ಲಿಷ್‌: 16,229 ಮಂದಿಗೆ ಇದ್ದಲ್ಲೇ ಪರೀಕ್ಷೆ

ಮೌಲ್ಯಮಾಪನ ಅಬಾಧಿತ: ಸುರೇಶ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 2:31 IST
Last Updated 2 ಜೂನ್ 2020, 2:31 IST
ಎಸ್.ಸುರೇಶ್ ಕುಮಾರ್
ಎಸ್.ಸುರೇಶ್ ಕುಮಾರ್   

ಬೆಂಗಳೂರು: ‘ಇದೇ 18ರಂದು ನಡೆಯಲಿರುವ ಪಿಯು ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿನಿಲಯ ವಾಸಿಗಳಾಗಿದ್ದವರಿಗೆ ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

‘ಒಟ್ಟು 16,229 ವಿದ್ಯಾರ್ಥಿಗಳು ಬದಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಇಚ್ಛೆ ವ್ಯಕ್ತಪಡಿಸಿದ್ದು, ಅದರಂತೆ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗುವುದು. ಅದರ ವಿವರವನ್ನು ಶೀಘ್ರದಲ್ಲೆ ಪಿಯು ಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ಸಚಿವರು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ಹೊರ ರಾಜ್ಯದ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದ್ದು, ಅವರ ಇಚ್ಛೆಯಂತೆ ಆ ರಾಜ್ಯದ ಗಡಿ ಭಾಗದ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ವಿಶೇಷವಾಗಿ ಕಾಸರಗೋಡಿನ ಗಡಿ ಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಗಡಿಭಾಗದಿಂದ ಪರೀಕ್ಷಾ ಕೇಂದ್ರಕ್ಕೆ ಮತ್ತು ಪರೀಕ್ಷೆ ಸಮಯದ ನಂತರ ಗಡಿ ಭಾಗದವರೆಗೆ ಬಸ್ ವ್ಯವಸ್ಥೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಪಿಯು ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಮೌಲ್ಯಮಾಪನ ಅಬಾಧಿತ: ‘ಎಂಟು ಜಿಲ್ಲೆಗಳ 34 ಕೇಂದ್ರಗಳಲ್ಲಿ ದ್ವಿತೀಯ ಪಿಯು ವಿವಿಧ ವಿಷಯಗಳ ಮೌಲ್ಯ
ಮಾಪನ ಪ್ರಕ್ರಿಯೆ ನಡೆಯುತ್ತಿದ್ದು ಸುಮಾರು 6,500 ಉಪನ್ಯಾಸಕರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿಗದಿತ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ. ಪಿಸಿಎಂಬಿ ವಿಷಯಗಳ ಮೌಲ್ಯಮಾಪನ ಬೆಂಗಳೂರಿನಲ್ಲಿ ನಡೆಯಲಿದೆ. ಸಾಮರ್ಥ್ಯ ಇರುವ ಉಪನ್ಯಾಸಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಮುಂದಿನ‌ದಿನಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಚಿವರು ಮನವಿ ಮಾಡಿದರು.

‘ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲೂ ವ್ಯವಸ್ಥಿತವಾಗಿ ಮೌಲ್ಯಮಾಪನ ಕೆಲಸ ನಡೆಯುತ್ತಿದೆ. ಹಲವೆಡೆ ಹಾಸ್ಟೆಲ್‌ಗಳನ್ನು ಒದಗಿಸಲಾಗಿದೆ. ಕೆಲವೆಡೆ ಲಾಡ್ಜ್‌ಗಳನ್ನು ತೆರೆಸಿ ವ್ಯವಸ್ಥೆ ಮಾಡಲಾಗಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಮಾಲೋಚನೆ
‘ಕೊರೊನಾ ಕಾರಣಕ್ಕೆ ವಿಳಂಬವಾಗಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಲು ಗೃಹ ಮತ್ತು ಆರೋಗ್ಯ ಇಲಾಖೆಗಳು ಸಹಕಾರ ನೀಡಲಿವೆ’ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಸೋಮವಾರ ಇಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಪರೀಕ್ಷೆಗೆ ಮಾಡಬೇಕಾದ ತಯಾರಿಗಳ ಬಗ್ಗೆ ಸಮಾಲೋಚನೆ ನಡೆಸಿ ಮಾತನಾಡಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಬೇಕೆನ್ನುವುದನ್ನು ಹೈಕೋರ್ಟ್ ಸಹ ಪುರಸ್ಕರಿಸಿದೆ. ಆದರೆ ಈ ಬಾರಿಯ ಪರೀಕ್ಷೆ ಬೇಕು-ಬೇಡ ಎಂಬ ಕೆಲ ಮನಸ್ಥಿತಿಗಳ ಮಧ್ಯೆ ನ್ಯಾಯಾಲಯವೂ ಈ ಕುರಿತು ಕಣ್ಗಾವಲು ನಡೆಸುತ್ತಿದ್ದು, ಅದಕ್ಕಾಗಿ ಗೃಹ ಮತ್ತು ಆರೋಗ್ಯ ಇಲಾಖೆಗಳ ಸಹಕಾರದ ಅಗತ್ಯ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.