ADVERTISEMENT

‘ಶಿಕ್ಷಣ ನೀತಿ‌’ಯಲ್ಲಿ ಖಾಸಗೀಕರಣಕ್ಕೆ ಒತ್ತು

ಸಾಹಿತಿ ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:23 IST
Last Updated 30 ಜುಲೈ 2019, 19:23 IST
ಸಭೆಯಲ್ಲಿ ವೈ.ಮರಿಸ್ವಾಮಿ ಮಾತನಾಡಿದರು. ಶಿಕ್ಷಣ ತಜ್ಞ ಫಾದರ್‌ ವೆಸ್ಲಿ ಮೋರಾಸ್‌, ಸಾಹಿತಿ ವಡ್ಡಗೆರೆ ನಾಗರಾಜಯ್ಯ ಇದ್ದಾರೆ –ಪ್ರಜಾವಾಣಿ ಚಿತ್ರ
ಸಭೆಯಲ್ಲಿ ವೈ.ಮರಿಸ್ವಾಮಿ ಮಾತನಾಡಿದರು. ಶಿಕ್ಷಣ ತಜ್ಞ ಫಾದರ್‌ ವೆಸ್ಲಿ ಮೋರಾಸ್‌, ಸಾಹಿತಿ ವಡ್ಡಗೆರೆ ನಾಗರಾಜಯ್ಯ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ರಾಷ್ಟ್ರೀಯ ಶಿಕ್ಷಣ ನೀತಿ–2019’ರ ಕರಡಿನಲ್ಲಿರುವ ಅಂಶಗಳನ್ನು ಗಮನಿಸಿದರೆಸಮಾನತೆ, ಸೋದರತ್ವ, ಜಾತ್ಯತೀತ ಮುಂತಾದ ಸಂವಿಧಾನದ ಆಶಯಗಳಿಗೆ ಹೆಚ್ಚು ಗಮನ ನೀಡಿದಂತೆ ಕಾಣುತ್ತಿಲ್ಲ. ಖಾಸಗೀಕರಣಕ್ಕೆ ಉತ್ತೇಜನ ನೀಡಿ ಶಿಕ್ಷಣವನ್ನು ಉದ್ಯಮದ ಹಾದಿಯಲ್ಲಿ ಕೊಂಡೊ ಯ್ಯುವಂತಿದೆ’ ಎಂದುಸಾಹಿತಿ ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯಪಟ್ಟರು.

ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ–2019ರ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳ ಸಮಾಲೋಚನಾ ಸಭೆ’ಯಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಸಂಬಂ‌ಧಿತ ನೀತಿಯ ಕರಡು ಶಿಕ್ಷಣ ತಜ್ಞರಿಂದ ರಚನೆಯಾಗಬೇಕಿತ್ತು. ಶಾಲಾ ಕಾಲೇಜುಗಳ ಅಧ್ಯಾಪಕರಿಗೆ ಇದರ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ.ಕರಡು ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರ ಲಭ್ಯಇದೆ. ಈ ಕುರಿತು ಸುದೀರ್ಘ ಚರ್ಚೆಯಾಗಬೇಕಾಗಿದ್ದು, ಕನಿಷ್ಠ ಮೂರು ತಿಂಗಳ ಕಾಲಾವಕಾಶದ ಅಗತ್ಯವಿದೆ’ ಎಂದರು.

ADVERTISEMENT

‘ಕರಡು ಸಮಿತಿ ಅಧ್ಯಕ್ಷರಾಗಿರುವ ಕಸ್ತೂರಿ ರಂಗನ್‍ ಅವರು ಮೂಲತಃ ವಿಜ್ಞಾನಿ. ಇವರು ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಳು ಏನು’ ಎಂದು ಪ್ರಶ್ನೆ ಮಾಡಿದರು.

‘ಕರಡಿನ ಅಂಶಗಳನ್ನು ಗಮನಿ ಸಿದರೆ, ಅದು ನಿರ್ದಿಷ್ಟಧರ್ಮ ಹಾಗೂ ವರ್ಗವನ್ನು ಪ್ರತಿನಿಧಿಸುವಂತಿದೆ.ಚರಕ, ಭಾಸ್ಕರಾಚಾರ್ಯ, ಚಾಣಕ್ಯ ಅವರ ಬಗ್ಗೆ ಕರಡಿನಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ, ದೇಶದಲ್ಲಿ ಶಿಕ್ಷಣ ವ್ಯವಸ್ಥೆಗೆ ಕೊಡುಗೆ ನೀಡಿರುವ ಅಂಬೇಡ್ಕರ್ ಹಾಗೂ ಜ್ಯೋತಿಬಾ ಫುಲೆ ಅವರನ್ನು ಕಡೆಗಣಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಪರಿವರ್ತನಾ ಜನಾಂ ದೋಲನ ಪ್ರಧಾನ ಕಾರ್ಯದರ್ಶಿ ವೈ. ಮರಿಸ್ವಾಮಿ ಮಾತನಾಡಿ, ‘ಪ್ರತಿಭೆ ಆಧರಿತ ವೇತನ ಹಾಗೂ ಬಡ್ತಿ ಅಂಶಗಳನ್ನು ಇದರಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಕೂಡಲೇ ಈ ಅಂಶವನ್ನು ಕೈಬಿಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.