ADVERTISEMENT

ಹೊಸ ಪರೀಕ್ಷಾ ಪದ್ಧತಿ ರದ್ದತಿಗೆ ಬರಗೂರು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 15:40 IST
Last Updated 31 ಅಕ್ಟೋಬರ್ 2025, 15:40 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ಕೇಂದ್ರೀಯ ಶಾಲಾ ಪರೀಕ್ಷೆಗಳ ಮಾದರಿಯಲ್ಲಿ ತೇರ್ಗಡೆ ಅಂಕವನ್ನು ಶೇ 33ಕ್ಕೆ ನಿಗದಿ ಮಾಡಿ, ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆ ನಡೆಸುವ ಶಾಲಾ ಶಿಕ್ಷಣ ಇಲಾಖೆ ನಿರ್ಧಾರವನ್ನು ತಡೆಯಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚೆ ನಡೆಸಿದ ಅವರು, ಹಲವು ಸಲಹೆಗಳನ್ನು ನೀಡಿದ್ದಾರೆ.

ಕೇಂದ್ರೀಯ ಶಾಲೆಗಳ ಪದ್ಧತಿ ಅನುಸರಿಸಲು ಗಣೇಶ್‌ ಭಟ್ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸಿನಂತೆ ಶಾಲಾ ಶಿಕ್ಷಣ ಇಲಾಖೆ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತಂದಿದೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ತಿರಸ್ಕರಿಸಿ, ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅಳವಡಿಕೆಗೆ ಸಿದ್ಧತೆ ನಡೆದಿದೆ. ಈಗ ಕೇಂದ್ರೀಯ ಶಾಲಾ ಪರೀಕ್ಷಾ ಮಾದರಿ ಅನುಸರಿಸುವುದು ಒಂದು ತಾತ್ವಿಕ ವಿಪರ್ಯಾಸ. ಎನ್‌ಸಿಇಆರ್‌ಟಿ ಮಾದರಿಯಲ್ಲೇ ಪಠ್ಯಪುಸ್ತಕಗಳು ಇರಬೇಕು ಎನ್ನುವುದು ಸಾಕಾರಗೊಳ್ಳುವುದಾದರೆ ಎನ್‌ಇಪಿ ತಿರಸ್ಕರಿಸುವ ಅಗತ್ಯವೇ ಇರಲಿಲ್ಲ. ಶಾಲಾ ಶಿಕ್ಷಣ ಇಲಾಖೆ ಸರ್ಕಾರದ ನಿಲುವನ್ನು ಉಲ್ಲಂಘಿಸಿ ರಾಜ್ಯದ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆ ತಂದಿದೆ ಎಂದು ಬರಗೂರು ದೂರಿದ್ದಾರೆ.

ADVERTISEMENT

ಮೊದಲಿದ್ದ ಪರೀಕ್ಷಾ ಪದ್ಧತಿಯ ದೋಷಗಳು ಏನು ಎನ್ನುವುದನ್ನು ಖಚಿತಪಡಿಸದೆ ಅಥವಾ ದೋಷಗಳು ಇಲ್ಲದಿದ್ದರೂ ಹೊಸ ಪರೀಕ್ಷಾ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಆಂತರಿಕ ಮೌಲ್ಯಮಾಪನದ 20 ಅಂಕಗಳೂ ಸೇರಿ ಪ್ರತಿ ವಿಷಯದಲ್ಲಿ 33 ಅಂಕ ಗಳಿಸಿದರೆ ತೇರ್ಗಡೆ ಮಾಡುವ ಕ್ರಮ ಶಿಕ್ಷಣದ ಗುಣಮಟ್ಟಕ್ಕೆ ಮಾರಕವಾಗುತ್ತದೆ. ಆಂತರಿಕ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗೆ ಒಂದು ವಿಷಯದಲ್ಲಿ 20ಕ್ಕೆ 20 ಅಂಕ ನೀಡಿದರೆ ಆ ವಿದ್ಯಾರ್ಥಿ ಮುಖ್ಯ ಪರೀಕ್ಷೆಯಲ್ಲಿ ಕೇವಲ 13 ಅಂಕ ಪಡೆದರೂ ಸಾಕು. ಇದುವರೆಗಿನ ಆಂತರಿಕ ಅಂಕಗಳನ್ನು ಪರಿಶೀಲಿಸಿದರೆ ಯಾವ ವಿದ್ಯಾರ್ಥಿಯೂ 18ಕ್ಕಿಂತ ಕಡಿಮೆ ಪಡೆದಿಲ್ಲ. ಇದು ಅವೈಜ್ಞಾನಿಕ ಕ್ರಮ. ಆಂತರಿಕ ಅಂಕಗಳನ್ನು 10 ಅಥವಾ ಅದಕ್ಕಿಂತ ಕಡಿಮೆ ನಿಗದಿ ಮಾಡಬೇಕು. ಲಿಖಿತ ಪರೀಕ್ಷಾ ಅಂಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ. 

ಯಾವ ಯಾವ ಪಾಠಗಳಲ್ಲಿ ಎಷ್ಟು ಅಂಕಗಳಿಗೆ ಎಷ್ಟು ಪ್ರಶ್ನೆಗಳನ್ನು ಕೇಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯೇ ಪಟ್ಟಿ ನೀಡಿದೆ. ಪಾಠ ಮಾಡುವ ಶಿಕ್ಷಕರಿಗೆ ಇರಬೇಕಾದ ಪ್ರಶ್ನೆ ಕೇಳುವ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಲಾಗಿದೆ. ಇಂತಹದ್ದೆ ಪ್ರಶ್ನೆ ಎಂದು ಪೂರ್ವ ನಿರ್ಧಾರ ಮಾಡಿ ಶಿಕ್ಷಕರನ್ನು ಅಷ್ಟಕ್ಕೆ ಸೀಮಿತಗೊಳಿಸಿ ಪಾಠ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಪೂರ್ಣ ಬೋಧನೆಗೆ ಇತಿಶ್ರೀ ಹಾಡಲಾಗಿದೆ. ಪಾಠಾಧಾರಿತ ಪೌಲ್ಯಾಂಕನದ ಪ್ರಕಾರ ಎಲ್ಲ ವಿಷಯಗಳನ್ನೂ ಸೇರಿಸಿ ಒಂದು ವರ್ಷದಲ್ಲಿ 100ಕ್ಕೂ ಹೆಚ್ಚು ಕಿರು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿಲ್ಲ ಎಂದು ದೂರಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಶಿಕ್ಷಣಾಸಕ್ತರ ಜತೆ ಸಮಾಲೋಚನೆ ಮಾಡಬೇಕು. ಸಂ‍ಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಬೇಕು. ನಿರ್ದಿಷ್ಟ ನಿರ್ಧಾರಕ್ಕೆ ಬರುವವರೆಗೆ ಹೊಸ ಪ್ರಯೋಗಗಳಿಗೆ ಮುಂದಾಗಬಾರದು ಎಂದು ಒತ್ತಾಯಿಸಿದ್ದಾರೆ.

* ’ಹೊಸ ಪದ್ಧತಿ‘ ಶಿಕ್ಷಣ ಗುಣಮಟ್ಟಕ್ಕೆ ಮಾರಕ

* ಲಿಖಿತ ಪರೀಕ್ಷಾ ಅಂಕಗಳಿಗೆ ಆದ್ಯತೆಗೆ ಸಲಹೆ

*ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.