ADVERTISEMENT

ಅಪ್ಪ–ಮಗನನ್ನೇ ಗೆಲ್ಲಿಸಿಕೊಳ್ಳಲಾಗಲಿಲ್ಲ: ಈಶ್ವರಪ್ಪ ಲೇವಡಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 20:00 IST
Last Updated 18 ನವೆಂಬರ್ 2019, 20:00 IST
   

ಬಾಗಲಕೋಟೆ: ‘ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿಯೇ ಅಪ್ಪ– ಮಗನನ್ನು (ಎಚ್.ಡಿ. ದೇವೇಗೌಡ–ನಿಖಿಲ್ ಕುಮಾರಸ್ವಾಮಿ) ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಎಚ್.ಡಿ.ಕುಮಾರಸ್ವಾಮಿ ಈಗ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸುವುದಾಗಿ ಹೇಳುತ್ತಿದ್ದಾರೆ. ಅದು ಹಾಸ್ಯಾಸ್ಪದ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂಬುದು ಜನರ ಅಪೇಕ್ಷೆಯಾಗಿತ್ತು. ಬಿಜೆಪಿಗೆ ಬಹುಮತ ಬಾರದ ಕಾರಣ ಅವರ ಆಸೆ ಈಡೇರಲಿಲ್ಲ’ ಎಂದು ಹೇಳಿದರು.

‘ಆದರೂ ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಲಸ ಮಾಡಲಿಲ್ಲ ಎಂದು ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ. ಹೀಗಾಗಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದರಿಂದ ಬಿಜೆಪಿಗೆ ಪೂರ್ಣ ಬಹುಮತ ಬರಲು ಸಹಕಾರಿಯಾಗಲಿದೆ’ ಎಂದರು.

ADVERTISEMENT

‘ಉಪ ಚುನಾವಣೆ ಬಳಿಕ ಸರ್ಕಾರ ಬೀಳುತ್ತೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆ
ಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಐದಾರು ಸೀಟು ಬರೊಲ್ಲ ಅಂದಿದ್ರು. ಬಿಜೆಪಿಗೆ 25 ಸೀಟು ಬಂತು. ಸಿದ್ದರಾಮಯ್ಯಗೆ ಸಿಕ್ಕಿದ್ದು ಒಂದೇ ಸೀಟು. ಯಡಿಯೂರಪ್ಪ ಸಿ.ಎಂ ಆಗೊಲ್ಲ ಅಂತಿದ್ರು. ಅವರು ಆದರು. ನರೇಂದ್ರ ಮೋದಿ ಪ್ರಧಾನಿ ಆಗೊಲ್ಲ ಅಂತಿದ್ರು.. ಅವರೂ ಆದರು. ಸಿದ್ದರಾಮಯ್ಯ ಏನು ಆಗೊಲ್ಲ ಎನ್ನುವರೋ ಅದೆಲ್ಲಾ ಆಗುತ್ತಿದೆ.

ಈಗಲೂ ಯಡಿಯೂರಪ್ಪ ಮನೆಗೆ ಹೋಗ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಇನ್ನೂ ಮೂರೂವರೆ ವರ್ಷ ಸಿ.ಎಂ ಆಗಿರುತ್ತಾರೆ’ ಎಂದು ಹೇಳಿದರು.

‘ನರೇಂದ್ರ ಮೋದಿ, ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಟ್ಟು ನಾನೇ ದೊಡ್ಡ ಮನುಷ್ಯ ಅಂತಾ ತೋರಿಸೊ ನಾಟಕ ಸಿದ್ದರಾಮಯ್ಯ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.