
ಬೆಂಗಳೂರು: ‘ಕಾನೂನುಗಳನ್ನು ರಚಿಸುವುದು ಮಾತ್ರವಲ್ಲ, ಅವು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾನೂನು ಮತ್ತು ಸಂಸದೀಯ ಸುಧಾರಣಾ ಮಂಡಳಿಯು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನೂರು ಕಾನೂನುಗಳು– ನೂರು ಅಭಿಮತಗಳು’ ಪುಸ್ತಕದ ಮೂರು ಸಂಪುಟಗಳನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು.
‘ಜನರಿಗೆ ಒಳ್ಳೆಯದಾಗಬೇಕು ಮತ್ತು ಜನರ ಸಮಸ್ಯೆ ಬಗೆಹರಿಯಬೇಕು ಎಂಬ ಉದ್ದೇಶದಿಂದ ಕಾನೂನುಗಳನ್ನು ರಚಿಸುತ್ತೇವೆ. ಅವು ಪರಿಣಾಕಾರಿಯಾಗಿ ಜಾರಿಯಾದರೆ ಮಾತ್ರ ಉಪಯೋಗವಾಗುತ್ತದೆ. ನಮ್ಮ ಹಿಂದಿನ ಸರ್ಕಾರದಲ್ಲಿ ಮೌಢ್ಯಗಳ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದೆವು. ಆದರೆ ಅದು ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ’ ಎಂದರು.
‘ವಿದ್ಯಾವಂತರೇ ಮೌಢ್ಯಗಳ ಆಚರಣೆಯಲ್ಲಿ ತೊಡಗಿದ್ದರಿಂದ ಆ ಕಾಯ್ದೆಯ ಉದ್ದೇಶ ಈಡೇರಲಿಲ್ಲ. ಬಸವಣ್ಣ 12ನೆಯ ಶತಮಾನದಲ್ಲೇ ಜಾತಿ ಹೋಗಬೇಕು ಎಂದು ಕರೆ ನೀಡಿದರು. ಅದಾಗಿ 850 ವರ್ಷಗಳಾದರೂ ಜಾತಿ ಹೋಗಿಲ್ಲ. ವಿದ್ಯಾವಂತರೇ ಜಾತಿಯ ಪ್ರತಿಪಾದಕರು. ಈ ಪರಿಸ್ಥಿತಿ ಬದಲಾಗದೆ ಕೇವಲ ಕಾನೂನುಗಳನ್ನು ರೂಪಿಸಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ’ ಎಂದರು.
‘ನಮ್ಮ ಸರ್ಕಾರ ಬಂದ ಎರಡು ವರ್ಷಗಳ ಅವಧಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರ ನೇತೃತ್ವದಲ್ಲಿ ನೂರು ಕಾನೂನುಗಳನ್ನು ರಚಿಸಿದ್ದೇವೆ. ಅವು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂಬ ಉದ್ದೇಶದಿಂದ ಕಾನೂನು ತಜ್ಞರು, ನಿವೃತ್ತ ನ್ಯಾಯಮೂರ್ತಿಗಳಿಂದ ಅಭಿಪ್ರಾಯ ಕೇಳಿದ್ದೆವು. ಅವು ಸಂವಿಧಾನ ಬದ್ಧವೇ ಎಂಬುದನ್ನು ಪರಿಶೀಲಿಸಿದ್ದೆವು. ಈ ಎಲ್ಲವೂ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ಜಾತಿ, ಆರ್ಥಿಕ, ಸಾಮಾಜಿಕ, ರಾಜಕೀಯ ಅಸಮಾನತೆ ಇದೆ. ಇವನ್ನು ತೊಲಗಿಸದೇ ಇದ್ದರೆ, ಅಸಮಾನತೆಯಿಂದ ನೊಂದ ಜನರು ಈ ವ್ಯವಸ್ಥೆಯನ್ನೇ ಧ್ವಂಸ ಮಾಡಬಹುದು ಎಂದು ಬಿ.ಆರ್.ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದರು. ಈ ಅಸಮಾನತೆಗಳನ್ನು ಹೋಗಲಾಡಿಸಲು ಕಾನೂನುಗಳನ್ನು ರಚಿಸಿದ್ದೇವೆ’ ಎಂದು ವಿವರಿಸಿದರು.
‘ಸಂಡೆ–ಮಂಡೆ ಲಾಯರ್’
‘ನಾನು ಕಾನೂನು ಪದವಿಯನ್ನು ಸರಿಯಾಗಿ ಓದಲಿಲ್ಲ ವಕೀಲಿಕೆಯನ್ನೂ ಸರಿಯಾಗಿ ಮಾಡಲಿಲ್ಲ. ನನ್ನ ಕಾನೂನು ಅಧ್ಯಯನ ಅರ್ಧ ಕಾಲೇಜಿನಲ್ಲಿ ಅರ್ಧ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿತ್ತು. ಆಗಾಗ್ಗೆ ಕೋರ್ಟ್‌ಗೆ ಹೋಗುತ್ತಿದ್ದೆ. ಅಂತಹ ವಕೀಲರನ್ನು ನಮ್ಮ ಕಡೆ ಸಂಡೆ–ಮಂಡೆ ಲಾಯರ್ ಎನ್ನುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ವಕೀಲಿಕೆ ಮಾತ್ರ ಅಲ್ಲ. ಕಾನೂನು ಕಾಲೇಜಿನಲ್ಲಿ ಪಾಠವನ್ನೂ ಮಾಡುತ್ತಿದ್ದೆ. ಅದು ಎಷ್ಟರಮಟ್ಟಿಗೆ ಪಾಠ ಮಾಡುತ್ತಿದ್ದೆನೋ ಗೊತ್ತಿಲ್ಲ. ಆದರೆ ಚೆನ್ನಾಗಿ ಪಾಠ ಮಾಡುತ್ತೀಯ ಎಂದು ಕೆಲವರು ಹೇಳುತ್ತಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.