ADVERTISEMENT

ಗಗನಕ್ಕೇರಿದ ಬೆಲೆ: ಶಿಕ್ಷಕರ ಜೇಬಿಗೆ ಹೊರೆಯಾದ ಮೊಟ್ಟೆ

ಸರ್ಕಾರ ನೀಡುತ್ತಿರುವ ಮೊತ್ತ ₹ 5.20, ಮಾರುಕಟ್ಟೆ ದರ ₹7

ಚಂದ್ರಹಾಸ ಹಿರೇಮಳಲಿ
Published 26 ಡಿಸೆಂಬರ್ 2023, 23:02 IST
Last Updated 26 ಡಿಸೆಂಬರ್ 2023, 23:02 IST
ಮೊಟ್ಟೆ
ಮೊಟ್ಟೆ   

ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡುವ ಬೇಯಿಸಿದ ಮೊಟ್ಟೆಯ ಹೆಚ್ಚುವರಿ ಖರ್ಚು ಭರಿಸಲು ಶಿಕ್ಷಕರು ಹರಸಾಹಸ ಮಾಡುತ್ತಿದ್ದಾರೆ.

ಮೊಟ್ಟೆ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಮೊಟ್ಟೆ ಖರೀದಿಸಲು ಶಾಲಾ ಶಿಕ್ಷಣ ಇಲಾಖೆ ನೀಡುವ ಮೊತ್ತಕ್ಕೂ, ಮಾರುಕಟ್ಟೆ ದರಕ್ಕೂ ಸಾಕಷ್ಟು ವ್ಯತ್ಯಾಸವಾಗುತ್ತಿರುವುದು ಶಿಕ್ಷಕರಿಗೆ ಹೊರೆಯಾಗಿ ಪರಿಣಮಿಸಿದೆ.

ಪೌಷ್ಟಿಕಾಂಶದ ಕೊರತೆ ನೀಗಿಸಲು ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡುವುದನ್ನು ಶಾಲಾ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 38.37 ಲಕ್ಷ ಮಕ್ಕಳು ಮೊಟ್ಟೆಗೆ ಬೇಡಿಕೆ ಸಲ್ಲಿಸಿದ್ದಾರೆ. 

ADVERTISEMENT

ಪ್ರತಿ ಮಗುವಿಗೂ ವರ್ಷದಲ್ಲಿ 100 ಮೊಟ್ಟೆಗಳನ್ನು ನೀಡಲಾಗುತ್ತಿದೆ. ಒಂದು ಮೊಟ್ಟೆಗೆ ₹6 ನಿಗದಿ ಮಾಡಲಾಗಿದೆ. ಈ ಹಣವನ್ನು ಶಾಲಾ ಶಿಕ್ಷಣ ಇಲಾಖೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಜಂಟಿ ಖಾತೆಗೆ ಹಾಕುತ್ತದೆ. ಅದರಲ್ಲಿ ಮೊಟ್ಟೆ ಬೇಯಿಸಲು ಇಂಧನ ವೆಚ್ಚ 30 ಪೈಸೆ,  ಮೊಟ್ಟೆಯ ಗಟ್ಟಿಪದರ(ವೋಡು) ಸುಲಿದು ಕೊಡುವ ಬಿಸಿಯೂಟ ತಯಾರಕರು ಮತ್ತು ಸಹಾಯಕರಿಗೆ 30 ಪೈಸೆ, ಸಾಗಣೆ ವೆಚ್ಚ 20 ಪೈಸೆ ನೀಡಬೇಕಿದೆ. ಮೊಟ್ಟೆ ಖರೀದಿಗೆ ಉಳಿಯುವುದು ₹5.20 ಮಾತ್ರ. 

ಗಗನಕ್ಕೇರಿದ ಮೊಟ್ಟೆ ಬೆಲೆ–ಹೊಂದಾಣಿಕೆಗೆ ಪರದಾಟ: 

ನವೆಂಬರ್‌ನಲ್ಲಿ ₹6 ಇದ್ದ ಮೊಟ್ಟೆಯ ಚಿಲ್ಲರೆ ಮಾರಾಟ ಬೆಲೆ ಪ್ರಸಕ್ತ ತಿಂಗಳು ₹7ದಾಟಿದೆ. ಮೊಟ್ಟೆಯ ಬೇಡಿಕೆ ಹೆಚ್ಚುತ್ತಲೇ ಇದ್ದು, ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಶಿಕ್ಷಕರು ಮೊಟ್ಟೆಯ ವ್ಯತ್ಯಾಸದ ಹಣ ಭರಿಸಲು ಕಷ್ಟವಾಗಿದೆ. 

‘ಕಡಿಮೆ ಮಕ್ಕಳು ಇರುವ ಶಾಲೆಗಳಲ್ಲಿ ಹೇಗೋ ಶಿಕ್ಷಕರೇ ತಾವೇ ನಿಭಾಯಿಸುತ್ತಾರೆ. ನಮ್ಮ ಶಾಲೆಯಲ್ಲಿ 300ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ತಿಂಗಳಿಗೆ ₹5 ಸಾವಿರ ಹೆಚ್ಚುವರಿ ಹೊಂದಾಣಿಕೆ ಮಾಡಬೇಕಿದೆ. ಕೆಲ ಪೋಷಕರು ಒಂದೆರಡು ಬಾರಿ ಸಹಾಯ ಮಾಡಿದರು. ಒಂದಷ್ಟು ವಾರ ಶಿಕ್ಷಕರೇ ಭರಿಸಿದ್ದೇವೆ’ ಎನ್ನುತ್ತಾರೆ ಬೆಂಗಳೂರು ಗ್ರಾಮಂತರ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯ ಶಿಕ್ಷಕ. 

‘ವಾರದಲ್ಲಿ ಎರಡು ದಿನ ನಾವೇ ಅಂಗಡಿ ಹೋಗಿ ತೆಗೆದುಕೊಂಡು ಬರಬೇಕು. ಶಾಲೆಯಿಂದ ಅಂಗಡಿಗೆ 4.5 ಕಿ.ಮೀ ಆಗುತ್ತದೆ. ಶಾಲೆ ಬಳಿಗೆ ತಂದುಕೊಡಲು ಹೆಚ್ಚು ಹಣ ಕೇಳುತ್ತಾರೆ. ಕೆಲವೊಮ್ಮೆ ಹಲವು ಮೊಟ್ಟೆಗಳು ಒಡೆದುಹೋಗುತ್ತವೆ. ಮೊದಲೇ ತಂದು ಇಟ್ಟುಕೊಂಡರೆ ಹಾಳಾಗುತ್ತವೆ. ಒಡೆದ, ಹಾಳಾದ ಮೊಟ್ಟೆಗಳಿಗೂ ಶಿಕ್ಷಕರೇ ಜವಾಬ್ದಾರರು’ ಎನ್ನುತ್ತಾರೆ ಹೊಸನಗರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯೊಂದರ ಶಿಕ್ಷಕ.  

ಬಾಳೆಹಣ್ಣು, ಚಿಕ್ಕಿಗೆ ಆದ್ಯತೆ:

ಬೇಡಿಕೆ ಸಲ್ಲಿಸುವ ಮಕ್ಕಳಿಗೆ ಕಡ್ಡಾಯವಾಗಿ ಮೊಟ್ಟೆ ನೀಡಬೇಕು ಎಂಬ ನಿಯಮವಿದ್ದರೂ, ಬೆಲೆ ಏರಿಕೆಯ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ, ಕಡಿಮೆ ದರಕ್ಕೆ ದೊರೆಯುವ ಬಾಳೆಹಣ್ಣು ನೀಡಲು ಹೆಚ್ಚಿನ ಶಾಲೆಗಳು ಒಲವು ತೋರಿವೆ. ಹಲವು ಸರ್ಕಾರಿ ಶಾಲೆಗಳ ಶಿಕ್ಷಕರು ಮೇಲಧಿಕಾರಿಗಳ ಭಯದಿಂದ ತಾವೇ ಹಣ ಹಾಕಿ ಮೊಟ್ಟೆಯ ವ್ಯತ್ಯಾಸದ ದರ ಹೊಂದಾಣಿಕೆ ಮಾಡಿಕೊಂಡರೆ, ಕೆಲ ಶಾಲೆಗಳು ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿಕ್ಕಿ, ಬಾಳೆಹಣ್ಣು ನೀಡುತ್ತಿವೆ. ಕೆಲ ಅನುದಾನಿತ ಶಾಲೆಗಳಲ್ಲಿ ವಾರಕ್ಕೆ ಒಂದೇ ದಿನ ಮೊಟ್ಟೆ ನೀಡುತ್ತಿರುವ ಪ್ರಕರಣಗಳು ವರದಿಯಾಗಿವೆ. 

’ಹಳ್ಳಿಗಳಲ್ಲಿ ಬಾಳೆಹಣ್ಣು ಕಡಿಮೆ ಬೆಲೆಗೆ ಸಿಗುತ್ತವೆ. ನಮ್ಮ ಶಾಲೆಯಲ್ಲಿ ಮೊಟ್ಟೆ ತಿನ್ನುವವರ ಸಂಖ್ಯೆ ಕಡಿಮೆ ಇರುವ ಕಾರಣ ಹೊಂದಾಣಿಕೆಯಾಗುತ್ತಿದೆ. ನೆರೆಯ ಶಾಲೆಗಳಲ್ಲಿ ಮೊಟ್ಟೆಗೆ ಬೇಡಿಕೆ ಇದ್ದರೂ, ಅನಿವಾರ್ಯವಾಗಿ ಬಾಳೆಹಣ್ಣು ನೀಡುತ್ತಿದ್ದಾರೆ’ ಎನ್ನುತ್ತಾರೆ ಧಾರವಾಡದ ಸರ್ಕಾರಿ ಶಾಲೆಯೊಂದರ ಶಿಕ್ಷಕಿ. 

ಮೊಟ್ಟೆ ಪೂರೈಸದ ಇಸ್ಕಾನ್‌

ಬೆಂಗಳೂರಿನ ಶಾಲೆಗಳಿಗೆ ಇಸ್ಕಾನ್‌ ಹೊರತುಪಡಿಸಿ, ಬಿಸಿಯೂಟ ಪೂರೈಸುವ ಇತರೆ ಸಂಸ್ಥೆಗಳು ಮೊಟ್ಟೆಯನ್ನೂ ಸರಬರಾಜು ಮಾಡುತ್ತಿವೆ. ಬೆಂಗಳೂರು ನಗರದ ಶೇ 70ರಷ್ಟು ಶಾಲೆಗಳಿಗೆ ಇಸ್ಕಾನ್‌ ಬಿಸಿಯೂಟ ಪೂರೈಸುತ್ತದೆ. ಇಂತಹ ಶಾಲೆಗಳ ಖಾತೆಗೆ ಶಾಲಾ ಶಿಕ್ಷಣ ಇಲಾಖೆ ಮೊಟ್ಟೆಯ ಹಣ ಹಾಕುತ್ತದೆ. ಅಲ್ಲಿನ ಶಿಕ್ಷಕರೇ ಮೊಟ್ಟೆ ದರದ ವ್ಯತ್ಯಾಸದ ಹೆಚ್ಚುವರಿ ಹಣ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿ ತಿಂಗಳು ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಟೆಂಡರ್‌ ಮೂಲಕವೇ ಶಾಲೆಗಳಿಗೆ ಮೊಟ್ಟೆ ಪೂರೈಸಬೇಕು
ಶಿವರಾಜ್‌ ಡಿ.ಪ್ರಭು, ಪೋಷಕ, ಸಾಮಾಜಿಕ ಕಾರ್ಯಕರ್ತ. 
ಚಳಿಗಾಲ, ವರ್ಷಾಂತ್ಯದಲ್ಲಿ ಮೊಟ್ಟೆ ಧಾರಣೆ ಏರಿಕೆ ಸಹಜ. ಹಾಗಾಗಿ, ಸರಾಸರಿ ದರ ನಿಗದಿ ಮಾಡಿ 10 ತಿಂಗಳಿಗೆ ನೀಡಲಾಗುತ್ತದೆ. ಚಿಕ್ಕಿ, ಬಾಳೆಹಣ್ಣಿಗೂ ₹6 ಇದೆ. ಎಲ್ಲ ಅಂಶ ಪರಿಗಣಿಸಿದರೆ ಹೊರೆಯಾಗದು
ಬಿ.ಬಿ.ಕಾವೇರಿ, ಆಯುಕ್ತೆ, ಶಾಲಾ ಶಿಕ್ಷಣ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.