ಚಿಂತಾಮಣಿ: ಈದ್ ಮಿಲಾದ್ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಕಟ್ಟಿದ್ದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿ ಒಂದು ಕೋಮಿನ ಯುವಕರ ಗುಂಪೊಂದು ನಗರಸಭೆಗೆ ನುಗ್ಗಿ ಕಚೇರಿಯ ಪೀಠೋಪಕರಣ ಮತ್ತು ಗಾಜುಗಳನ್ನು ಧ್ವಂಸ ಮಾಡಿದ ಪ್ರಕರಣ ಗುರುವಾರ ನಡೆದಿದೆ.
ನಗರಸಭೆಯ ಅನುಮತಿ ಪಡೆಯದೆ ನಗರದಲ್ಲಿ ಕಟ್ಟಿದ್ದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ನಗರಸಭೆ ಸಿಬ್ಬಂದಿ ತೆಗೆದು ಕಚೇರಿ ಆವರಣದಲ್ಲಿ ಇಟ್ಟಿದ್ದರು. ಇದರಲ್ಲಿ ಮೆಕ್ಕಾ ಮದೀನಾ ಭಾವಚಿತ್ರ ಮತ್ತು ಪ್ರತಿಕೃತಿಗಳನ್ನೂ ಕಿತ್ತು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಆರೋಪಿಸಿ ಯುವಕರ ಗುಂಪು ನಗರಸಭೆ ಮುಂದೆ ಪ್ರತಿಭಟನೆ ಮಾಡುತ್ತಿದ್ದರು.
ಈ ಸಮಯದಲ್ಲಿ ಕಿಡಿಗೇಡಿಗಳ ಗುಂಪು ಏಕಾಏಕಿ ಕಚೇರಿ ಒಳಗೆ ನುಗ್ಗಿ ಗ್ಲಾಸ್ ಒಡೆದರು. ಕುರ್ಚಿ, ಮೇಜು ಮತ್ತಿತರ ಸಾಮಗ್ರಿಗಳನ್ನು ಕಿತ್ತು ಹೊರಕ್ಕೆ ಎಸೆದು ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ವಿಷಯ ಗೊತ್ತಾದ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಗುಂಪನ್ನು ಚದುರಿಸಿದರು.
‘ಬುಧವಾರ ಅಷ್ಟೇ ಹಬ್ಬ ಮುಗಿದಿದೆ. ಅಷ್ಟರೊಳಗೆ ನಗರಸಭೆ ಸಿಬ್ಬಂದಿ ದುರುದ್ದೇಶದಿಂದ ಮೆಕ್ಕಾ ಮದೀನ ಪ್ರತಿಕೃತಿ, ಭಾವಚಿತ್ರಗಳನ್ನು ಕಿತ್ತು ಗೋದಾಮಿನಲ್ಲಿ ಹಾಕಿದ್ದಾರೆ. ಇದು ಧರ್ಮಕ್ಕೆ ಮಾಡಿದ ಅಪಮಾನ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಚೇರಿಗೆ ನುಗ್ಗಿ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ಹರೀಶ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
‘ಅನುಮತಿ ಇಲ್ಲದೆ ಅನಧಿಕೃತವಾಗಿ ಹಾಕಿದ್ದ ಪ್ಲೆಕ್ಸ್ ಮತ್ತು ಬ್ಯಾನರ್ ತೆಗೆದುಹಾಕಲಾಗಿದೆ. ನಗರಸಭೆಯ ಸಿಬ್ಬಂದಿ ಕೆಲವನ್ನು ಅವರಿಗೆ ವಾಪಸ್ ಕೊಟ್ಟಿದ್ದಾರೆ. ಉಳಿದವುಗಳನ್ನು ತಂದು ಗೋದಾಮಿನಲ್ಲಿ ಇಟ್ಟಿದ್ದಾರೆ. ಇದರಲ್ಲಿ ಸಿಬ್ಬಂದಿ ತಪ್ಪಿಲ್ಲ. ಆದರೂ ಕಚೇರಿಗೆ ನುಗ್ಗಿ ದೌರ್ಜನ್ಯ ನಡೆಸಿದ್ದಾರೆ’ ಎಂದು ಪೌರಾಯುಕ್ತ ಹರೀಶ್ ತಿಳಿಸಿದರು.
ಕಿಡಿಗೇಡಿಗಳು ದುಂಡಾವರ್ತನೆ ನಡೆಸಿರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ಯಾವುದೇ ಇದ್ದರೂ ಕಾನೂನಿನಂತೆ ನಡೆದುಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.