ADVERTISEMENT

ಚುನಾವಣಾ ಬೆಟ್ಟಿಂಗ್‌ ತಡೆಗೆ ‘ಕೋಕಾ’ ಅಸ್ತ್ರ!

ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಡಿಜಿಪಿ ನೀಲಮಣಿ ರಾಜು ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:00 IST
Last Updated 23 ಏಪ್ರಿಲ್ 2019, 20:00 IST
   

ಬೆಂಗಳೂರು: ‘ಚುನಾವಣಾ ಬೆಟ್ಟಿಂಗ್’ನಲ್ಲಿ ತೊಡಗಿರುವವರ ವಿರುದ್ಧ ಗೂಂಡಾ ಅಥವಾ ಕೋಕಾ ಅಸ್ತ್ರ ಪ್ರಯೋಗಿಸುವಂತೆ ಡಿಜಿಪಿ ನೀಲಮಣಿ ಎನ್‌.ರಾಜು ಮಂಗಳವಾರ ಆದೇಶ ಹೊರಡಿಸಿದ್ದಾರೆ.

‘ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಒಂದು ತಿಂಗಳಿಗೆ ಸರಿಯಾಗಿ ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಕೆಲವರು ಅಭ್ಯರ್ಥಿಗಳ ಸೋಲು–ಗೆಲುವಿನ ಲೆಕ್ಕಾಚಾರ ಹಾಕಿ ಕೊಂಡು ಬೆಟ್ಟಿಂಗ್‌ನಲ್ಲಿ ತೊಡಗಿ
ದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಬೆಟ್ಟಿಂಗ್ ಸಂಬಂಧ ಚರ್ಚೆ ನಡೆಯುತ್ತಿದೆ. ಹೀಗಾಗಿ, ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಕೆಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದು ಡಿಜಿಪಿ ಹೇಳಿದ್ದಾರೆ.

ಏ.18ರಂದು ಮೊದಲ ಹಂತದ ಮತದಾನ ಮುಗಿದ ನಂತರ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಟ್ಟಿಂಗ್ ಚಟುವಟಿಕೆಗಳು ಗರಿಗೆದರಿದ್ದವು. ನಗದು ಮಾತ್ರವಲ್ಲದೆ, ಕೆಲವರು ಬಣವೆ, ಬೈಕ್‌, ದನ–ಕರುಗಳನ್ನೂ ಪಣವಾಗಿ ಇಟ್ಟಿರುವುದು ವರದಿಯಾಗಿತ್ತು.

ADVERTISEMENT

ಅಧಿಕಾರಿಗಳಿಗೆ ಡಿಜಿಪಿ ಸೂಚನೆಗಳು

l ತಮ್ಮ ನಗರ ಅಥವಾ ಜಿಲ್ಲಾ ವ್ಯಾಪ್ತಿಗಳಲ್ಲಿ ಸಕ್ರಿಯರಾಗಿರುವ ಬೆಟ್ಟಿಂಗ್ ದಂಧೆಕೋರರನ್ನು ಹಾಗೂ ಬುಕ್ಕಿಗಳನ್ನು ಗುರುತಿಸಿ, ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು.

l ಬೆಟ್ಟಿಂಗ್ ಸಂಬಂಧ ಮಾಧ್ಯಮಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ಗುಪ್ತಚರ ಸಿಬ್ಬಂದಿಯೂ ನಿಗಾ ಇಡಬೇಕು.

l ಗಸ್ತು ತಿರುಗುವ ಹೊಯ್ಸಳ, ಚೀತಾ, ಚಾಲುಕ್ಯ ಹಾಗೂ ಗರುಡ ವಾಹನಗಳ ಸಿಬ್ಬಂದಿಗೂ ಬೆಟ್ಟಿಂಗ್ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಬೇಕು.

l ಬೆಟ್ಟಿಂಗ್ ನಿಗ್ರಹಕ್ಕೆಂದೇ ಪ್ರತಿ ಜಿಲ್ಲೆಯಲ್ಲೂ ವಿಶೇಷ ತಂಡಗಳನ್ನು ರಚಿಸಿ, ಅವುಗಳಿಗೆ ನಿರ್ದಿಷ್ಟ ಕಾರ್ಯಸೂಚಿ ನೀಡಬೇಕು.

l ರೂಢಿಗತ ಜೂಜುಕೋರರ ವಿರುದ್ಧ ಗೂಂಡಾ ಕಾಯ್ದೆ ಅಥವಾ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿ ಕ್ರಮ ತೆಗೆದುಕೊಳ್ಳಬೇಕು.

l ಬೆಟ್ಟಿಂಗ್‌ನಿಂದ ದೂರ ಇರುವಂತೆ ಎಲ್ಲ ವಲಯಗಳ ಐಜಿಪಿ ಹಾಗೂ ಜಿಲ್ಲೆಗಳ ಎಸ್ಪಿಗಳು ತಮ್ಮ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸಬೇಕು.

ಜಾಮೀನು ಸಿಗಲ್ಲ

‘ಗೂಂಡಾ ಅಥವಾ ಕೋಕಾ ಅಡಿ ಬಂಧಿಸಲಾದ ವ್ಯಕ್ತಿಗಳನ್ನು ಬೇರೆ ಪ್ರಕರಣಗಳ ಮಾದ­ರಿಯಲ್ಲಿ 24 ತಾಸುಗಳೊಳಗೆ ನ್ಯಾಯಾ­­­ಧೀ­­ಶರ ಎದುರು ಹಾಜರು­ಪಡಿ­ಸ­ಬೇಕಾದ ಅಗತ್ಯವಿಲ್ಲ. ಬದಲಿಗೆ ನೇರವಾಗಿ ಜೈಲಿಗೆ ಕಳು­ಹಿಸ­ಬ­ಹುದು. ಅಲ್ಲದೇ, ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿ­ಯೆ­ಯ ಅಗತ್ಯವಿಲ್ಲ. ಆರೋಪಿಯನ್ನು ಗರಿಷ್ಠ ಒಂದು ವರ್ಷದವರೆಗೆ ಜೈಲಿನಲ್ಲಿ ಇರಿ­ಸ­­ಬಹುದು. ಈ ಸಂದರ್ಭದಲ್ಲಿ ಬಂಧಿ­ತರು ಜಾಮೀನು ಕೋರಿ ಆರೋಪಿ ನ್ಯಾಯಾಲ­ಯದ ಮೊರೆ ಹೋಗುವಂತಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.