ADVERTISEMENT

ಶಿರಾ, ರಾಜರಾಜೇಶ್ವರಿನಗರ ಉಪಚುನಾವಣೆ: ಆಯೋಗದ ಬಿಗಿ ಕಣ್ಗಾವಲು

ನಾಮಪತ್ರ ಸಲ್ಲಿಕೆಗೆ ಇದೇ 16 ಕೊನೇ ದಿನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 19:30 IST
Last Updated 9 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ಇದೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಚುನಾವಣೆ ಸುಸೂತ್ರವಾಗಿ ನಡೆಸಲು ಚುನಾವಣಾ ಆಯೋಗ ಬಿಗಿ ಕ್ರಮಗಳನ್ನು ಕೈಗೊಂಡಿದ್ದು, ಆಯಾ ವಿಧಾನಸಭಾ ಕ್ಷೇತ್ರಗಳ ಗಡಿಯಲ್ಲೇ ಆಯೋಗ ವಾಹನಗಳ ತಪಾಸಣೆ ಆರಂಭಿಸಿದೆ.

ಇದಕ್ಕೆ ಪೂರಕವಾಗಿ ಶಿರಾದಲ್ಲಿ 12 ಫ್ಲಯಿಂಗ್ ಸ್ಕ್ವಾಡ್‌ ಮತ್ತು 8 ಸ್ಟಾಟಿಕ್‌ ಸರ್ವೇಲೆನ್ಸ್‌ ತಂಡ, ಆರ್.ಆರ್‌.ನಗರದಲ್ಲಿ ತಲಾ 27 ಫ್ಲಯಿಂಗ್‌ ಸ್ಕ್ವಾಡ್‌ ಮತ್ತು ಸ್ಟಾಟಿಕ್‌ ಸರ್ವೇಲೆನ್ಸ್‌ ತಂಡಗಳನ್ನು ನಿಯೋಜಿಸಿರುವುದಾಗಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ತಿಳಿಸಿದ್ದಾರೆ.

ADVERTISEMENT

ಈಗಾಗಲೇ ಶಿರಾದಲ್ಲಿ 42 ಗೋಡೆ ಬರಹ, 437 ಪೋಸ್ಟರ್‌ಗಳು ಮತ್ತು 382 ಬ್ಯಾನರ್‌ಗಳು. ಆರ್‌.ಆರ್‌.ನಗರದಲ್ಲಿ 40 ಗೋಡೆ ಬರಹ, 31 ಪೋಸ್ಟರ್‌ ಮತ್ತು 43 ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು.

ಯಾವುದೇ ರೀತಿಯ ದೂರುಗಳನ್ನು ಸಹಾಯವಾಣಿ 180042551950 ಗೆ ಕರೆ ಮಾಡಿ ತಿಳಿಸಬಹುದು. ಮತದಾರರು ತಮ್ಮ ಗುರುತಿನ ಚೀಟಿಯ ಬಗ್ಗೆ ವೋಟರ್‌ ಹೆಲ್ಪ್‌ಲೈನ್ ಆ್ಯಪ್‌ ಮೂಲಕ ಮಾಹಿತಿ ಪಡೆಯುಬಹುದು ಎಂದೂ ಅವರು ತಿಳಿಸಿದರು.

ಇವಿಎಂ ಮಾಹಿತಿ:ಶಿರಾ ಕ್ಷೇತ್ರಕ್ಕೆ 660 ಬ್ಯಾಲೆಟ್‌ ಯೂನಿಟ್(ಬಿಯು)‌, 660 ಕಂಟ್ರೋಲ್‌ ಯೂನಿಟ್(ಸಿಯು)‌ ಮತ್ತು 660 ವಿವಿಪ್ಯಾಟ್‌, ಆರ್‌.ಆರ್‌.ನಗರದಲ್ಲಿ 1374 ಬಿಯು, 1374 ಸಿಯು ಮತ್ತು 1374 ವಿವಿಪ್ಯಾಟ್‌ ಬಳಕೆ ಮಾಡಲಾಗುತ್ತದೆ. ಶಿರಾದಲ್ಲಿ 330 ಮತ್ತು ಆರ್‌.ಆರ್‌.ನಗರದಲ್ಲಿ 678 ಮತದಾನ ಕೇಂದ್ರಗಳು ಇರಲಿವೆ ಎಂದರು.

ಕೋವಿಡ್ ಇದ್ದರೆ ಅಂಚೆ ಮತದಾನ

ಅಂಗವಿಕಲರು, 80 ವರ್ಷ ವಯಸ್ಸು ಮೀರಿದವರು ಮತ್ತು ಕೋವಿಡ್‌ ಪಾಸಿಟಿವ್‌‌ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಇವರು ಫಾರಂ 12 ಡಿ ಮೂಲಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು. ಚುನಾವಣಾ ಅಧಿಕಾರಿಗಳು ಇವರು ಇರುವಲ್ಲಿಗೆ ಹೋಗಿ ಅರ್ಜಿ ಸ್ವೀಕರಿಸಿ ಅಂಚೆ ಮತದಾನಕ್ಕೆ ಅರ್ಹರೇ ಎಂದು ಪರಿಶೀಲನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.