ADVERTISEMENT

‘ಗ್ಯಾರಂಟಿ’ಗಳಿಂದ ಅಧಿಕಾರಿಗಳಿಗೆ ಸಂಕಷ್ಟ: ನ್ಯಾಯಮೂರ್ತಿ ಬಿ.ವಿ. ನಾಗರತ್ನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 15:33 IST
Last Updated 2 ಆಗಸ್ಟ್ 2025, 15:33 IST
<div class="paragraphs"><p>ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಲಿನಿ ರಜನೀಶ್, ಬಿ.ವಿ. ನಾಗರತ್ನ, ಎಸ್. ರಾಮನಾಥನ್‌ ಮತ್ತು ಉಮಾ ಮಹಾದೇವನ್ ಪಾಲ್ಗೊಂಡಿದ್ದರು</p></div>

ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಲಿನಿ ರಜನೀಶ್, ಬಿ.ವಿ. ನಾಗರತ್ನ, ಎಸ್. ರಾಮನಾಥನ್‌ ಮತ್ತು ಉಮಾ ಮಹಾದೇವನ್ ಪಾಲ್ಗೊಂಡಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಚುನಾವಣೆಯಲ್ಲಿ ಮತ ಪಡೆಯಲು ನೀಡುವ ಭರವಸೆಗಳನ್ನು ನಂತರ ಪೂರ್ಣಗೊಳಿಸಲು ನಾಗರಿಕ ಸೇವೆಯಲ್ಲಿರುವ ಅಧಿಕಾರಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದರು.

ADVERTISEMENT

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಪಬ್ಲಿಕ್‌ ಅಡ್ಮಿನಿಸ್ಟ್ರೇಷನ್‌ನ ಕರ್ನಾಟಕ ಶಾಖೆ ಆಯೋಜಿಸಿದ್ದ, ‘ಕೆ.ಎಸ್‌. ಅಯ್ಯರ್‌ ಸ್ಮಾರಕ ದತ್ತಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚುನಾವಣೆಗೆ ಮುನ್ನ ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗುತ್ತದೆ. ಆದರೆ, ಆ ಭರವಸೆಗಳನ್ನು ಹೇಗೆ ಜಾರಿ ಮಾಡಬಹುದು ಎಂಬುದನ್ನು ಫಲಿತಾಂಶ ಬಂದ ನಂತರವಷ್ಟೇ ಯೋಚಿಸಲಾಗುತ್ತದೆ. ಹೀಗೆ ಎಲ್ಲ ಸರ್ಕಾರಗಳೂ ಮಾಡುತ್ತವೆ ಎಂದೇನೂ ಅಲ್ಲ. ಬಹುತೇಕ ಸಂದರ್ಭದಲ್ಲಿ ಅಧಿಕಾರ ಪಡೆದುಕೊಳ್ಳುವ ಉತ್ಸಾಹದಲ್ಲಿ, ವಾಸ್ತವದಲ್ಲಿ ನೀಡಲು ಸಾಧ್ಯವಿಲ್ಲದ ‘ಗ್ಯಾರಂಟಿ’ಗಳನ್ನು ಪ್ರಸ್ತಾಪಿಸಲಾಗುತ್ತದೆ. ಅದರಿಂದ ಅಧಿಕಾರಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗೆ ಕಠಿಣವೆನಿಸಿದರೂ ಉತ್ತಮ ಆಡಳಿತಕ್ಕೆ ಅನುಕೂಲಕರವಾದ ಸಲಹೆಗಳನ್ನು ನೀಡಬೇಕು’ ಎಂದರು.

‘ಸಂವಿಧಾನದಡಿ ಉತ್ತಮ ಆಡಳಿತ’ದ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಗಳು ಪ್ರಕಟಿಸುವ ಯೋಜನೆಗಳು ವಾಸ್ತವದಲ್ಲಿ ಅನುಷ್ಠಾನ ಮಾಡುವಂತಹವಾಗಿರಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಎಲ್ಲರಿಗೂ ಸಮನಾದ ಸೌಲಭ್ಯವನ್ನು ಕಲ್ಪಿಸುವುದು ಉತ್ತಮ ಆಡಳಿತದ ಮೂಲ ಆಶಯ’ ಎಂದರು.

‘ಸಚಿವರಿಗೆ ಬೇಕಿರುವಂತೆ ಸಲಹೆ ನೀಡದೆ, ಆಡಳಿತಕ್ಕೆ ಅನುವಾಗುವ ಸಲಹೆಯನ್ನು ನೀಡುವ ಕಾರ್ಯದರ್ಶಿ ವರ್ಗಾವಣೆ ಶಿಕ್ಷೆಯನ್ನು ಅನುಭವಿಸಬೇಕಾದ ಸ್ಥಿತಿ ಇಂದಿದೆ. ಹಲವು ಸಚಿವರ ಬರಬಹುದು, ಹೋಗಬಹುದು. ಆದರೆ, ನಾಗರಿಕ ಸೇವೆಯಲ್ಲಿರುವರು ಸ್ಥಿರವಾಗಿರುತ್ತಾರೆ’ ಎಂದು ಹೇಳಿದರು.

‘ಸರ್ಕಾರದಲ್ಲಿರುವ ಅಧಿಕಾರಿಗಳು ದಿನಕ್ಕೆ ಹಲವು ‘ಫೈಲ್‌’ಗಳನ್ನು ನೋಡುತ್ತಾರೆ. ನಿತ್ಯದ ಕಾರ್ಯದಲ್ಲಿ ಅದು ಒಂದು ‘ಫೈಲ್‌’ ಎಂದಷ್ಟೇ ಭಾವಿಸುತ್ತಾರೆ. ಆದರೆ, ಒಂದು ‘ಫೈಲ್’ ನಾಗರಿಕರೊಬ್ಬರ ‘ಲೈಫ್‌’ ಆಗಿರುತ್ತದೆ. ಆದ್ದರಿಂದ ಪ್ರತಿಯೊಂದು ಕಡತವನ್ನೂ ಜನರ ಭವಿಷ್ಯ– ಜೀವನ ಎಂದೇ ಭಾವಿಸಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಪಬ್ಲಿಕ್‌ ಅಡ್ಮಿನಿಸ್ಟ್ರೇಷನ್‌ನ ಕರ್ನಾಟಕ ಶಾಖೆಯ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌, ಗೌರವ ಕಾರ್ಯದರ್ಶಿ ಎಸ್‌. ರಾಮನಾಥನ್‌, ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್‌ ಉಪಸ್ಥಿತರಿದ್ದರು.

‘ಪಂಚಾಯತ್‌ ಪತಿ’ ಬದಲಾಗಬೇಕು’
‘ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಪರವಾಗಿ ಅವರ ಪತಿ ಅಧಿಕಾರವನ್ನು ನಡೆಸುತ್ತಿದ್ದು ‘ಪಂಚಾಯತ್‌ ಪತಿ’ಗಳಾಗಿದ್ದಾರೆ. ಇಂತಹ ಸ್ಥಿತಿ ದೂರಾಗಬೇಕಿದೆ. ಕಾನೂನಿನಲ್ಲಾಗಿರುವ ಬದಲಾವಣೆ ಸ್ಥಳೀಯ ಮಟ್ಟದಲ್ಲೂ ವಾಸ್ತವಕ್ಕೆ ಬರಬೇಕು. ಮಹಿಳೆಯರು ಅಧಿಕಾರ ನಡೆಸಬೇಕು’ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದರು. ‘ಸಂವಿಧಾನಕ್ಕೆ ತಿದ್ದುಪಡಿ ತಂದು ಜಾರಿಯಾಗಿರುವ ಪಂಚಾಯತ್‌ ರಾಜ್‌ನಿಂದಾಗಿ ಅಧಿಕಾರ ವಿಕೇಂದ್ರೀಕರಣಗೊಂಡು ನಾಗರಿಕರಿಗೆ ಆಡಳಿತ ಹತ್ತಿರವಾಗುತ್ತಿದೆ. ಇದು ಉತ್ತಮ ಆಡಳಿತಕ್ಕೆ ಒಂದು ಮೈಲುಗಲ್ಲು. ಇದು ಸ್ಥಳೀಯ ಜನರ ಭಾಗವಹಿಸುವಿಕೆಗೆ ದಾರಿ ಮಾಡಿಕೊಟ್ಟಿದ್ದು ಕ್ಷಿಪ್ರ ಕಾಮಗಾರಿಗಳನ್ನು ನಡೆಸಲು ಅವಕಾಶ ಕಲ್ಪಿಸಿದೆ. ಆದರೆ ಇವೆಲ್ಲ ಅವಕಾಶಗಳು ಕಾಗದದಲ್ಲಿ ಲಭ್ಯವಿದ್ದರೂ ಸ್ಥಳೀಯ ಸಂಸ್ಥೆಗಳ ವಾಸ್ತವ ಚಿತ್ರಣವೇ ಬೇರೆಯದ್ದಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಆದರೆ ಮಹಿಳೆಯ ಪತಿ ಅಧಿಕಾರವನ್ನು ನಡೆಸುತ್ತಿದ್ದಾರೆ. ಬಿಹಾರದಲ್ಲಿ ಪತ್ನಿ ಬದಲಾಗಿ ಪತಿಯೇ ಅಧಿಕಾರ ನಡೆಸಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.