ADVERTISEMENT

ರಾಮನಗರ ಕ್ಷೇತ್ರ: ಜೆಡಿಎಸ್ ಕೋಟೆ ವಶಕ್ಕೆ ಬಿಜೆಪಿ ಯತ್ನ

ಕಾಂಗ್ರೆಸ್‌ ಅಭ್ಯರ್ಥಿ ಇಲ್ಲದ ಮೊದಲ ಚುನಾವಣೆ

ಆರ್.ಜಿತೇಂದ್ರ
Published 27 ಅಕ್ಟೋಬರ್ 2018, 20:15 IST
Last Updated 27 ಅಕ್ಟೋಬರ್ 2018, 20:15 IST
   

ರಾಮನಗರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಜೆಡಿಎಸ್ ಅಭ್ಯರ್ಥಿ. ಕಾಂಗ್ರೆಸ್‌ನಿಂದ ವಲಸೆ ಹೋದ ಎಲ್‌. ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿ. ಈ ಇಬ್ಬರ ನಡುವೆ ನೇರ ಸ್ಪರ್ಧೆ ಇದೆ.

ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಹಲವು ಕಾರಣಕ್ಕೆ ಕುತೂಹಲ ಮೂಡಿಸಿದೆ. ಇಲ್ಲಿ ನಡೆದ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್ (ಹಿಂದಿನ ಜನತಾದಳ) ನೇರ ಎದುರಾಳಿಗಳಾಗಿದ್ದವು. ಇದೇ ಮೊದಲ ಬಾರಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಮೈತ್ರಿಕೂಟದ ಎರಡೂ ಪಕ್ಷಗಳು ಒಟ್ಟಾಗಿ ಹೆಜ್ಜೆ ಇಟ್ಟಿದ್ದು, ಡಿ.ಕೆ. ಸುರೇಶ್‌ ಇಡೀ ಪ್ರಚಾರದ ಸಾರಥ್ಯ ವಹಿಸಿರುವುದು ಸ್ವತಃ ಕಾಂಗ್ರೆಸ್ಸಿಗರ ಹುಬ್ಬೇರುವಂತೆ ಮಾಡಿದೆ. ಮುಖಂಡರು ಬದಲಾದಂತೆ ಕಾರ್ಯಕರ್ತರೂ ಜೆಡಿಎಸ್ ಅಭ್ಯರ್ಥಿಯನ್ನು ಮುಕ್ತ ಮನಸ್ಸಿನಿಂದ ಒಪ್ಪಿದಲ್ಲಿ ಮಾತ್ರ ಜೆಡಿಎಸ್ ಲೆಕ್ಕಾಚಾರ ಪಕ್ಕಾ ಆಗಲಿದೆ.

ಬಿಜೆಪಿ ಅಭ್ಯರ್ಥಿಯಾಗಿರುವ ಚಂದ್ರಶೇಖರ್, ವಿಧಾನ್‌ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಅವರ ಪುತ್ರ. ಈ ಬಾರಿ ಅವರು ಗೆದ್ದಲ್ಲಿ, ಕ್ಷೇತ್ರದಲ್ಲಿ ಬಿಜೆಪಿ ಮೊದಲ ಗೆಲುವು ದಾಖಲಿಸಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಮತ ಗಳಿಕೆ ತೃಪ್ತಿಕರವಾಗಿರಲಿಲ್ಲ. ಪಕ್ಷದೊಳಗಿನ ಬಂಡಾಯವೇ ದೊಡ್ಡ ಪೆಟ್ಟು ನೀಡಿದೆ. ಆದರೆ ಎಲ್ಲವನ್ನೂ ಸಂಭಾಳಿಸಿಕೊಂಡು ಮುನ್ನಡೆದಿರುವ ಕಮಲ ಪಾಳಯ ಹೊಸ ಸಂಘಟನೆಯೊಂದಿಗೆ ಚುನಾವಣೆಯ ರಣಕಹಳೆ ಊದಿದೆ. ಅದರಲ್ಲೂ ಕಳೆದೊಂದು ವಾರದಲ್ಲಿನ ಪ್ರಚಾರ ವೈಖರಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ADVERTISEMENT

ಎಚ್‌.ಡಿ. ಕುಮಾರಸ್ವಾಮಿ ನಾಮಬಲವೇ ಅನಿತಾ ಅವರಿಗೆ ಶ್ರೀರಕ್ಷೆ ಆಗಿದೆ. ಕಾಂಗ್ರೆಸ್ ಒಳಗೆ ಆರಂಭದಲ್ಲಿದ್ದ ಬಂಡಾಯ ಕೊಂಚ ಶಮನಗೊಂಡಿದ್ದು, ಸುರೇಶ್ ಸಾರಥ್ಯದಿಂದ ಜೆಡಿಎಸ್‌ ವಿಶ್ವಾಸ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ ತಮ್ಮಿಂದ ಚದುರಿಹೋಗಿದ್ದ ಅಲ್ಪಸಂಖ್ಯಾತ ಸಮುದಾಯದ ಮತವನ್ನು ಒಟ್ಟುಗೂಡಿಸಲು ಜೆಡಿಎಸ್ ಆದ್ಯತೆ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಸುಲಭ ಗೆಲುವು ದಾಖಲಿಸಬಹುದು ಎನ್ನುವ ಲೆಕ್ಕಾಚಾರ ಅನಿತಾ ಅವರದ್ದು.

ಆದರೆ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದ್ದು ಹಾಗೂ ಪ್ರಚಾರದ ಸಂದರ್ಭ ಅಲ್ಲಲ್ಲಿ ಮತದಾರರಿಂದ ಪ್ರತಿರೋಧ ವ್ಯಕ್ತವಾಗುತ್ತಿರುವುದು ಜೆಡಿಎಸ್ ನಿದ್ದೆಗೆಡಿಸಿದೆ.

ಈ ಅಂಶಗಳನ್ನೇ ಬಳಸಿಕೊಂಡು ಬಿಜೆಪಿಯು, ಮೈತ್ರಿಕೂಟದ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿದೆ. ‘ಸ್ವಾಭಿಮಾನಿ ರಾಜಕಾರಣ’ ಮೂಲಕ ಕುಟುಂಬದ ರಾಜಕಾರಣಕ್ಕೆ ಸಡ್ಡು ಹೊಡೆಯುವ ಪ್ರಯತ್ನದಲ್ಲಿದೆ. ಆದರೆ ಗೆಲುವಿನ ಹಾದಿ ಅಷ್ಟು ಸುಲಭವಲ್ಲ ಎಂಬುದೂ ಅರಿತಂತಿದೆ. ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮೂರನೇ ಉಪಚುನಾವಣೆ
ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಇದು ಮೂರನೇ ಉಪ ಚುನಾವಣೆ. 1997ರಲ್ಲಿ ಎಚ್‌.ಡಿ. ದೇವೇಗೌಡರು ಹಾಗೂ 2009ರಲ್ಲಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ಇಲ್ಲಿ ಉಪ ಚುನಾವಣೆಗಳು ನಡೆದಿದ್ದವು. ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.