ADVERTISEMENT

ಸೇನಾ ಗೌರವದೊಂದಿಗೆ ನಂದ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 20:10 IST
Last Updated 13 ಡಿಸೆಂಬರ್ 2018, 20:10 IST
ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಬಿ.ಸಿ.ನಂದ ಪಾರ್ಥಿವ ಶರೀರವನ್ನು ಗುರುವಾರ ಸೇನಾಧಿಕಾರಿಗಳು ಅಂತ್ಯಸಂಸ್ಕಾರದ ಸ್ಥಳಕ್ಕೆ ಕೊಂಡೊಯ್ದರು –ಪ್ರಜಾವಾಣಿ ಚಿತ್ರ
ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಬಿ.ಸಿ.ನಂದ ಪಾರ್ಥಿವ ಶರೀರವನ್ನು ಗುರುವಾರ ಸೇನಾಧಿಕಾರಿಗಳು ಅಂತ್ಯಸಂಸ್ಕಾರದ ಸ್ಥಳಕ್ಕೆ ಕೊಂಡೊಯ್ದರು –ಪ್ರಜಾವಾಣಿ ಚಿತ್ರ   

ಮಡಿಕೇರಿ: ಅನಾರೋಗ್ಯದಿಂದ ನಿಧನರಾಗಿದ್ದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಬಿದ್ದಂಡ ಚಂಗಪ್ಪ ನಂದ (87) ಅಂತ್ಯಸಂಸ್ಕಾರ ಗುರುವಾರ ಸಂಜೆ ಸೇನಾ ಗೌರವದೊಂದಿಗೆ ನೆರವೇರಿತು.

ನಂದ ಅವರು ಭೂಸೇನೆ ಉತ್ತರ ವಲಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ತಾಲ್ಲೂಕಿನ ಹೆಬ್ಬಟ್ಟಗೇರಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿ ಅಂತ್ಯಸಂಸ್ಕಾರದ ಸ್ಥಳಕ್ಕೆ ಸೇನಾಧಿಕಾರಿಗಳು ಕೊಂಡೊಯ್ದರು. ಸೇನೆಯ ಪರವಾಗಿ ಲೆಫ್ಟಿನೆಂಟ್‌ ಕರ್ನಲ್‌ ದಿನೇಶ್‌ ಕುಮಾರ್, ಕರ್ನಲ್‌ ಬೆಳ್ಯಪ್ಪ ಅವರು ಪುಷ್ಪ ನಮನ ಸಲ್ಲಿಸಿದರು. ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವವನ್ನು ದಿನೇಶ್‌ಕುಮಾರ್‌ ಅವರು ನಂದ ಪತ್ನಿ ಲೀಲಾ ಅವರಿಗೆ ಹಸ್ತಾಂತರಿಸಿದರು. ಕೊಡವ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಪುತ್ರಿ ದೇವಿಕಾ ಅವರು ಅಂತಿಮ ಸಂಸ್ಕಾರದ ವಿಧಾನ ನೆರವೇರಿಸಿದರು. ಬಳಿಕ ಶವವನ್ನು ತೋಟದಲ್ಲಿ ಹೂಳಲಾಯಿತು.

ADVERTISEMENT

‘ಕೆಲಸ ಮಾಡದವರಿಗೆ ಟಿಕೆಟ್‌ ಬೇಡ’

ಹುಬ್ಬಳ್ಳಿ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಲವು ಹಾಲಿ ಸಂಸದರ ಬದಲಿಗೆ ಹೊಸಬರಿಗೆ ಪಕ್ಷ ಟಿಕೆಟ್ ನೀಡಬೇಕು‌. ಅನ್ಯ ಪಕ್ಷದವರ ಬದಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೇ ಅವಕಾಶ ನೀಡಬೇಕು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಎಷ್ಟು ಅನುದಾನ ತಂದಿದ್ದಾರೆ, ಪ್ರದೇಶಾಭಿವೃದ್ಧಿ ನಿಧಿಯನ್ನು ಎಷ್ಟು ಖರ್ಚು ಮಾಡಿದ್ದಾರೆ, ಹಳ್ಳಿಗಳಿಗೆ ಭೇಟಿ ನೀಡಿದ್ದಾರೆಯೇ ಎಂಬ ವಿಷಯಗಳನ್ನು ಅಳತೆಗೋಲಾಗಿ ಇಟ್ಟುಕೊಂಡು ಟಿಕೆಟ್ ನೀಡಬೇಕು’ ಎಂದು ಹೇಳಿದರು.

ಜನ್ಮದಿನ ಆಚರಣೆಗೆ ಸಿ.ಎಂ. ಪ್ರವಾಸ

ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದೇ 16ರಂದು (ಭಾನುವಾರ) ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಈ ಸಲುವಾಗಿ ಖಾಸಗಿ ಪ್ರವಾಸ ಕೈಗೊಳ್ಳಲಿದ್ದಾರೆ.

‘ಮುಖ್ಯಮಂತ್ರಿಯವರು ಹುಟ್ಟುಹಬ್ಬದ ಪ್ರಯುಕ್ತ ಕುಟುಂಬದ ಸದಸ್ಯರ ಜೊತೆ ಶುಕ್ರವಾರವೇ ಪ್ರವಾಸ ತೆರಳಲಿದ್ದು, ಸೋಮವಾರ ಬೆಳಗಾವಿಗೆ ಮರಳುವರು. ಅಂದು ಮಧ್ಯಾಹ್ನದ ಬಳಿಕ ಅಧಿವೇಶನದಲ್ಲಿ ಭಾಗವಹಿಸುವರು’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಜಾಲಿ ಮರ ತೆಗೆಯಲು ಸೂಚನೆ

ಬೆಳಗಾವಿ: ‘ರಾಜ್ಯದ ಕೆರೆಗಳ ಅಂಗಳದಲ್ಲಿ ನೆಟ್ಟಿರುವ ಜಾಲಿ ಮರಗಳನ್ನು ಕಿತ್ತೆಸೆಯಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಭರವಸೆ ನೀಡಿದರು.

’ಈ ಮರಗಳನ್ನು ನೆಟ್ಟಿರುವುದು ತಾಯಿ ಹೃದಯಕ್ಕೆ ಮುಳ್ಳು ನೆಟ್ಟಂತೆ ಆಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.