ADVERTISEMENT

ಚುನಾವಣಾ ಬಾಂಡ್ ಅಕ್ರಮ: ಜಂಟಿ ಸದನ ಸಮಿತಿ ತನಿಖೆಗೆ ಎಸ್‌.ಆರ್. ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 20:15 IST
Last Updated 2 ಡಿಸೆಂಬರ್ 2019, 20:15 IST
ಎಸ್.ಆರ್.ಹಿರೇಮಠ
ಎಸ್.ಆರ್.ಹಿರೇಮಠ   

ಧಾರವಾಡ: ‘ಚುನಾವಣಾ ಬಾಂಡ್ ವಿಷಯದಲ್ಲಿ ₹ 6ಸಾವಿರ ಕೋಟಿ ಹಗರಣ ನಡೆದಿರುವ ಶಂಕೆ ಇದ್ದು, ಈ ಕುರಿತು ಸಂಸತ್ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಲೋಕಸಭೆ ಮತ್ತು ರಾಜ್ಯಸಭೆಯ ಸ್ಪೀಕರ್‌ಗಳನ್ನು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಸೋಮವಾರ ಒತ್ತಾಯಸಿದರು.

‘ಚುನಾವಣೆ ಸಂದರ್ಭದಲ್ಲಿ ಇಂಥ ಬಾಂಡ್‌ ಮೂಲಕ ಕೋಟಿಗಟ್ಟಲೆ ಹಣ ಪಡೆದು ಅದರ ಲೆಕ್ಕ ತೋರಿಸುವಲ್ಲಿ ಪಾರದರ್ಶಕತೆ ಕಾಪಾಡದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. 2017ರಲ್ಲಿ ರಾಜ್ಯಸಭೆಯಲ್ಲಿ ಬಹುಮತ ಸಿಗದಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದಿನ ಹಣಕಾಸು ಸಚಿವ ಅರುಣ ಜೇಟ್ಲಿ ಈ ಮಸೂದೆಯನ್ನು ಮಂಡಿಸಿದ್ದರು. ಈಗ ಈ ಬಹುಕೋಟಿ ಹಗರಣವನ್ನು ಮುಚ್ಚಿಹಾಕುವ ಯತ್ನ ನಡೆದಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘2017–18ರಲ್ಲಿ ಬಿಜೆಪಿ ಇಂಥ ಬಾಂಡ್‌ಗಳ ಮೂಲಕವೇ ಶೇ 95ರಷ್ಟು ಹಣವನ್ನು ಸಂಗ್ರಹಿಸಿರುವುದಾಗಿ ಅಸೋಸಿಯೇಷ್ ಫಾರ್ ಡೆಮಾಕ್ರೆಟಿಕ್ ರೆಫಾರ್ಮ್ಸ್‌ ಮತ್ತು ಹಿರಿಯ ಪತ್ರಕರ್ತರ ಖಾಸಗಿ ತನಿಖೆ ಹೇಳಿದೆ. ಹೀಗಾಗಿ ಆರ್‌ಬಿಐ ಕಾಯ್ದೆ, ಕಂಪನಿ ಕಾಯ್ದೆ, ಚುನಾವಣಾ ಕಾಯ್ದೆ ಹಾಗೂ ಇನ್ನಿತರ ಆಯಾಮಗಳಲ್ಲಿ ಇದರ ತನಿಖೆ ನಡೆಯಬೇಕಿದೆ’ ಎಂದು ಹಿರೇಮಠ ಅಭಿಪ್ರಾಯಪಟ್ಟರು

ADVERTISEMENT

‘ಜಂಟಿ ಸದನ ಸಮಿತಿ ತನಿಖೆ ನಡೆಸಿದರೆ ಸತ್ಯಸಂಗತಿ ಹೊರಬರಲಿದೆ. ಈ ಕುರಿತಂತೆ ಸ್ಪೀಕರ್ ಓಂಪ್ರಕಾಶ ಬಿರ್ಲಾ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು’ ಎಂದರು.

‘ಡಿ. 5ರಂದು ನಡೆಯುತ್ತಿರುವ ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಆಡಳಿತಾರೂಢ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿ ಇವರನ್ನು ಸೋಲಿಸುವ ಮೂಲಕ ಜನತೆ ತಕ್ಕ ಪಾಠ ಕಲಿಸಬೇಕಿದೆ. ಜನರಿಂದ ಆಯ್ಕೆಯಾಗಿದ್ದ ಇವರು ಹಣ ಮತ್ತು ಅಧಿಕಾರದ ಬೆನ್ನುಹತ್ತಿ ಪಕ್ಷಾಂತರಗೊಂಡು ಸರ್ಕಾರ ಪಥನಗೊಳಿಸಿ ರಜಕಾರಣವನ್ನು ಅನೈತಿಕ ಪರಾಕಾಷ್ಠೆಗೆ ಒಯ್ದಿದ್ದಾರೆ. ಮತದಾರರು ಹೆಚ್ಚು ಜಾಗರೂಕರಾಗಿ ಮತ ಚಲಾಯಿಸಬೇಕು’ ಎಂದರು.

‘ಉಪಚುನಾವಣೆಯ 9 ಕ್ಷೇತ್ರಗಳಲ್ಲಿ ರಾಷ್ಟ್ರ ಸಮಿತಿಯ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಿಗೆ ಮತ ನೀಡಬೇಕು’ ಎಂದು ಹಿರೇಮಠ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.