ADVERTISEMENT

‘300 ಎಲೆಕ್ಟ್ರಿಕ್ ಬಸ್‌ ಓಡಾಟ ಶೀಘ್ರ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 17:11 IST
Last Updated 18 ಜನವರಿ 2021, 17:11 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ದಾವಣಗೆರೆ: ‘ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ 300 ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ. ವಾಯುಮಾಲಿನ್ಯ ಕುಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಎಸ್. ಸವದಿ ತಿಳಿಸಿದರು.

ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪುನರ್‌ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ವಿದೇಶಿ ಕಂಪನಿಗಳು ತಯಾರಿವೆ. ಒಂದು ಬಸ್ಸಿನ ಮೌಲ್ಯ ಸುಮಾರು ₹ 2 ಕೋಟಿ. ಕೇಂದ್ರ ಸರ್ಕಾರ ಖರೀದಿದಾರರಿಗೆ ₹ 55 ಲಕ್ಷ ರಿಯಾಯಿತಿ ನೀಡಲಿದೆ. ಖರೀದಿಸಿದ ಕಂಪನಿ ಅದನ್ನು ಸಾರಿಗೆ ಇಲಾಖೆಗೆ ನೀಡುತ್ತದೆ. ನಮ್ಮ ಚಾಲಕರು, ನಿರ್ವಹಕರು ಓಡಿಸುತ್ತಾರೆ. ಸಾರ್ವಜನಿಕರ ಹಣವನ್ನು ನಾವು ಪಡೆದುಕೊಂಡು ಬಸ್‌ನವರಿಗೆ ಕಿಲೋ ಮೀಟರ್‌ ಲೆಕ್ಕದಲ್ಲಿ ಹಣ ನೀಡುತ್ತೇವೆ’ ಎಂದು ತಿಳಿಸಿದರು.

ಬಸ್‌ಗೆ ಕಲ್ಲು ತೂರಾಟ ಸರಿಯಲ್ಲ: ‘ಯಾರೇ, ಎಲ್ಲೇ ಪ್ರತಿಭಟನೆ ಮಾಡಿದರೂ ಕಲ್ಲು ಬೀಳುವುದು ನಮ್ಮ ಬಸ್‌ಗಳಿಗೆ, ನಮ್ಮ ಇಲಾಖೆಗೆ. ಈಚೆಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರತಿಭಟನೆ ಮಾಡಿದರು. ಆ ಬಗ್ಗೆ ಬೇಸರವಿಲ್ಲ. ಆದರೆ, ಅವರ ಬದುಕಿಗೆ ಬೆಳಕಾಗಿರುವ ಇಲಾಖೆಯ ಬಸ್‌ಗಳಿಗೇ ಅವರೇ ಕಲ್ಲು ತೂರಿದ್ದು ಮಾತ್ರ ಬೇಸರ ಉಂಟುಮಾಡಿದೆ’ ಎಂದರು.

ADVERTISEMENT

ಎಚ್ಚರಿಕೆ ನೀಡಿದ ಚಂದ್ರಪ್ಪ: ‘ಕೊರೊನಾ ಸಂಕಷ್ಟದಲ್ಲೂ ಕಷ್ಟವಿದ್ದಾಗ ಸಾರಿಗೆ ಇಲಾಖೆ ₹ 1,780 ಕೋಟಿ ನೀಡಿದ್ದು, ಸಂಸ್ಥೆಯ 1.30 ಲಕ್ಷ ಸಿಬ್ಬಂದಿಗೆ ವೇತನ ಕೊಡುವಂತಾಯಿತು. 30 ಸಾವಿರ ಬಸ್‌ಗಳಲ್ಲಿ ಇನ್ನು 10 ಸಾವಿರ ಬಸ್‌ಗಳು ಓಡುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಯಾರದೋ ಮಾತು ಕೇಳಿ ದಿಢೀರ್‌ ಪ್ರತಿಭಟಿಸಿದ್ದು, ಸರಿಯಲ್ಲ. ಮುಂದೆ ಹೀಗೆ ಮಾಡಿದರೆ ಉದ್ಯೋಗಕ್ಕೆ ಕುತ್ತು ಬರಬಹುದು’ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಚಂದ್ರಪ್ಪ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.