ADVERTISEMENT

ಜುಲೈ 1ರಿಂದ ವಿದ್ಯುತ್‌ ದರ ಮತ್ತೆ ಏರಿಕೆ: ಕೆಇಆರ್‌ಸಿ ಒಪ್ಪಿಗೆ

ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ವಾಪಸ್‌ ಪಡೆಯುವ ಪ್ರಸ್ತಾವಕ್ಕೆ ಕೆಇಆರ್‌ಸಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 19:28 IST
Last Updated 27 ಜೂನ್ 2022, 19:28 IST
   

ಬೆಂಗಳೂರು: ರಾಜ್ಯದಲ್ಲಿ ಜುಲೈ 1ರಿಂದ ಪ್ರತಿ ತಿಂಗಳ ವಿದ್ಯುತ್‌ ದರ ಮತ್ತಷ್ಟು ಹೆಚ್ಚಳವಾಗಲಿದೆ.

ಪ್ರತಿ ತಿಂಗಳು 100 ಯೂನಿಟ್‌ ಬಳಸುವಗ್ರಾಹಕರು ಹೆಚ್ಚುವರಿಯಾಗಿ ₹19ರಿಂದ ₹31ರವರೆಗೆ ಪಾವತಿಸಬೇಕಾಗುತ್ತದೆ. ಈ ದರ ಆಯಾ ವಿದ್ಯುತ್‌ ವಿತರಣಾ ಕಂಪನಿಗಳ ಮೇಲೆ ಅವಲಂಬನೆಯಾಗಿದೆ.

2021–22ನೇ ಸಾಲಿನ ಕೊನೆಯ ಎರಡು ತ್ರೈಮಾಸಿಕದಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿದೆ. ಹೀಗಾಗಿ, ಕಲ್ಲಿದ್ದಲು ಖರೀದಿಗೆ ಮಾಡಿರುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿದ್ದವು.

ADVERTISEMENT

ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು (ಎಫ್‌ಎಸಿ)ಪ್ರತಿ ಯೂನಿಟ್‌ಗೆ ₹38ರಿಂದ ₹55 ವಸೂಲಿ ಮಾಡಲು ಎಸ್ಕಾಂಗಳು ಕೋರಿದ್ದವು.ಬೆಸ್ಕಾಂ ₹55.28, ಮೆಸ್ಕಾಂ ₹38.98, ಸೆಸ್ಕ್‌ ₹40.47, ಹೆಸ್ಕಾಂ ₹49.54, ಗೆಸ್ಕಾಂ ₹39.36 ವಿಧಿಸುವಂತೆ ಪ್ರಸ್ತಾವದಲ್ಲಿ ಉಲ್ಲೇಖಿಸಿದ್ದವು.

ಈ ಪ್ರಸ್ತಾವನೆಗೆ ಕೆಇಆರ್‌ಸಿ ಅನುಮೋದನೆ ನೀಡಿದ್ದರೂ, ಎಸ್ಕಾಂಗಳು ನಿಗದಿಪಡಿಸಿದ್ದ ದರಗಳನ್ನು ಕಡಿತಗೊಳಿಸಿದೆ. ಕೋವಿಡ್‌ ಕಾರಣದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಹಕರಿಗೆ ಎಸ್ಕಾಂಗಳು ನಿಗದಿಪಡಿಸಿರುವ ದರಗಳಿಂದ ಹೊರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

2022ರ ಜುಲೈ 1ರಿಂದ ಡಿಸೆಂಬರ್‌ 31ರವರೆಗಿನ ಅವಧಿಯಲ್ಲಿ (ಆರು ತಿಂಗಳು)ಇಂಧನ ವೆಚ್ಚ ಹೊಂದಾಣಿ ಶುಲ್ಕವನ್ನು (ಎಫ್‌ಎಸಿ) ವಸೂಲಿ ಮಾಡುವ ಅವಕಾಶವನ್ನು ಕೆಇಆರ್‌ಸಿ ಕಲ್ಪಿಸಿದೆ.

ಮೆಸ್ಕಾಂ ವಸೂಲಿ ಮಾಡುವ ದರಗಳು ವಿಶೇಷ ಆರ್ಥಿಕ ವಲಯಕ್ಕೂ ಅನ್ವಯವಾಗಲಿದೆ. ಇದೇ ರೀತಿಯಲ್ಲಿ ಹೆಸ್ಕಾಂ ಪಡೆಯುವ ದರಗಳು ಹುಕ್ಕೇರಿ ಆರ್‌ಇಸಿಎಸ್‌ ಮತ್ತು ಏಕಸ್‌ ವಿಶೇಷ ಆರ್ಥಿಕ ವಲಯಕ್ಕೆ ಅನ್ವಯವಾಗಲಿದೆ.

ಶಾಖೋತ್ಪನ್ನ ವಿದ್ಯುತ್‌ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಾಗಿದೆ. ಇದರಿಂದ, ವಿದ್ಯುತ್‌ ಖರೀದಿಸಲು ಎಸ್ಕಾಂಗಳು ಮಾಡುವಒಟ್ಟಾರೆ ವೆಚ್ಚದಲ್ಲಿಯೂಪ್ರತಿ ಯೂನಿಟ್‌ಗೆ 29 ಪೈಸೆಯಷ್ಟು ಹೆಚ್ಚಳವಾಗಿತ್ತು ಎಂದು ಕೆಇಆರ್‌ಸಿ ತಿಳಿಸಿದೆ.

‘ಕಳೆದ ಒಂದು ವರ್ಷದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಈಗ ಎಲ್ಲ ಗ್ರಾಹಕರಿಗೂ ಏಕರೂಪದಲ್ಲಿ ದರ ಹೆಚ್ಚಿಸಲಾಗಿದೆ. ಅತಿ ಹೆಚ್ಚಿನ ದರ ವಿಧಿಸಲು ಬೆಸ್ಕಾಂಗೆ ಅವಕಾಶ ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇದು ತಾತ್ಕಾಲಿಕ ಮಾತ್ರ. ವಸೂಲಿ ಸಂಪೂರ್ಣ ಮುಕ್ತಾಯವಾದರೆ ಮತ್ತೆ ದರಗಳು ಯಥಾಸ್ಥಿತಿಗೆ ಬರಲಿವೆ. ಎಸ್ಕಾಂಗಳ ನಷ್ಟದ ಪ್ರಮಾಣವನ್ನು ಪರಿಗಣಿಸಿಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ. ಕಲ್ಲಿದ್ದಲುದರ ಸಹ ಹೆಚ್ಚಳವಾಗಿದೆ. ಹೀಗಾಗಿ, ಎಲ್ಲ ಅಂಶಗಳನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ’ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ. ರವಿಕುಮಾರ್‌ ತಿಳಿಸಿದ್ದಾರೆ.

ಪಂಜಾಬ್‌: ಜುಲೈ 1ರಿಂದ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್

ಚಂಡೀಗಡ (ಪಿಟಿಐ):ಪಂಜಾಬ್‌‌ನಲ್ಲಿ ಜುಲೈ 1ರಿಂದ ಗೃಹ ಬಳಕೆಗಾಗಿ ತಿಂಗಳಿಗೆ 300 ಯೂನಿಟ್‌ ವಿದ್ಯುತ್ ಅನ್ನುಉಚಿತವಾಗಿ ಪೂರೈಸಲಾಗುವುದು.

ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರವು ಸೋಮವಾರ ಮಂಡಿಸಿದ ತನ್ನ ಮೊದಲ ಬಜೆಟ್‌ನಲ್ಲಿ ಇದನ್ನು ಪ್ರಕಟಿಸಿದೆ. ಚುನಾವಣಾ ಪ್ರಚಾರದ ವೇಳೆ ಪಕ್ಷ ನೀಡಿದ ಪ್ರಮುಖ ಭರವಸೆಗಳಲ್ಲಿ ಇದೂ ಒಂದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.