ADVERTISEMENT

ನೀರು ಕುಡಿಯಲು ಬಂದ ಕಾಡಾನೆಗಳ ಸಾವು: ಕನಕಪುರದ ಚಿಕ್ಕಗೊಂಡಹಳ್ಳಿಯಲ್ಲಿ ದುರಂತ

ಕೆರೆಯಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡ: ಬೆಸ್ಕಾಂ ನಿರ್ಲಕ್ಷ್ಯದ ಆರೋಪ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 16:26 IST
Last Updated 3 ಅಕ್ಟೋಬರ್ 2020, 16:26 IST
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಚಿಕ್ಕಗೊಂಡಹಳ್ಳಿ ಕೆರೆಯಲ್ಲಿ ಎರಡು ಆನೆಗಳು ಸಾವನ್ನಪ್ಪಿವೆ
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಚಿಕ್ಕಗೊಂಡಹಳ್ಳಿ ಕೆರೆಯಲ್ಲಿ ಎರಡು ಆನೆಗಳು ಸಾವನ್ನಪ್ಪಿವೆ   

ರಾಮನಗರ: ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಚಿಕ್ಕಗೊಂಡಹಳ್ಳಿ ಸಮೀಪದ ಕೆರೆಯಲ್ಲಿ ನೀರು ಕುಡಿ
ಯಲು ಬಂದ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಪ್ರಕರಣ ಶನಿವಾರ ಗೊತ್ತಾಗಿದೆ.

ಎರಡು-ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆನೆಗಳು ಬಲಿಯಾಗಿದ್ದು ಹೇಗೆ?: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕೋಡಿಹಳ್ಳಿ ವನ್ಯಜೀವಿ ವಲಯಕ್ಕೆ ಸೇರಿರುವ ಈ ಅರಣ್ಯ ಪ್ರದೇಶದಲ್ಲಿ ಕೆರೆ ಇದೆ. ಇದರ ಮಧ್ಯೆ 11 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ತಂತಿಗಳು ಹಾದು ಹೋಗಿವೆ.

ADVERTISEMENT

ವಿದ್ಯುತ್‌ ತಂತಿಗಳು ಕೆರೆಯ ನೀರಿನಲ್ಲಿ ಮುಳುಗಿವೆ. ಇದರಿಂದಾಗಿ ನೀರಿನಲ್ಲಿ ವಿದ್ಯುತ್‌ ಪ್ರವಹಿಸಿದೆ. ನೀರಿನ ಸಂಪರ್ಕಕ್ಕೆ ಬಂದ ಕಾಡಾನೆಗಳು ವಿದ್ಯುತ್‌ ಶಾಕ್‌ನಿಂದಾಗಿ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಸಿಸಿಎಫ್‌ ಅಜಯ್‌ ಮಿಶ್ರಾ, ಬನ್ನೇರುಘಟ್ಟ ಡಿಸಿಎಫ್‌ ಪ್ರಶಾಂತ್‌, ಎಸಿಎಫ್‌ ಪ್ರಶಾಂತ್ ಅವರನ್ನು ಒಳಗೊಂಡ ಅಧಿಕಾರಿಗಳ ತಂಡವುಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಘಟನೆಗೆ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಕಾರಣವಾಗಿದ್ದು, ಅವರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸುವುದಾಗಿಯೂ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಎರಡೂ ಆನೆಗಳ ಕಳೇಬರಗಳು ಕೆರೆಯ ನಡುವೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.