ಬೆಂಗಳೂರು: ಕಾರ್ಮಿಕರ ವಿಮಾ ಯೋಜನೆಗೆ ನೋಂದಣಿ ಮಾಡದೇ ಇರುವ ಉದ್ಯೋಗದಾತರು ಯಾವುದೇ ಹಿಂಬಾಕಿ ಮತ್ತು ಪರಿಶೀಲನೆ ಇಲ್ಲದೆ, ನೋಂದಣಿ ಮಾಡಿಸಲು ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ಒಂದು ಬಾರಿಯ ಅವಕಾಶ ನೀಡಿದೆ.
ಹತ್ತು ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಸಂಸ್ಥೆ, ಕಾರ್ಖಾನೆಗಳು ಇಎಸ್‌ಐ ನೋಂದಣಿ ಮಾಡಿಸುವುದು ಹಾಗೂ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ವಂತಿಗೆ ಕಟ್ಟುವುದು ಕಡ್ಡಾಯ. ಅಂತಹ ಸಂಸ್ಥೆಗಳು ಆರಂಭವಾದ 15 ದಿನಗಳ ಒಳಗೆ ನೋಂದಣಿ ಮಾಡಿಸಬೇಕು ಎಂದು ಇಎಸ್‌ಐ ಕಾಯ್ದೆ ಹೇಳುತ್ತದೆ.
‘ಸಾಕಷ್ಟು ಉದ್ಯೋಗದಾತರು ತಮ್ಮ ಕಾರ್ಮಿಕರ ಇಎಸ್‌ಐ ನೋಂದಣಿ ಮಾಡಿಸುವುದಿಲ್ಲ. ಇದರಿಂದಾಗಿ ಕಾರ್ಮಿಕರು ಸಾಮಾಜಿಕ ಭದ್ರತಾ ಸವಲತ್ತುಗಳು, ಆರೋಗ್ಯ ವಿಮೆಯಂತಹ ಸವಲತ್ತುಗಳನ್ನು ಕಳೆದುಕೊಳ್ಳುತ್ತಾರೆ. ಹೀಗೆ ವಿಮೆ ವಂಚಿತರಾದ ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಗೆ ತರಲು ವಿಶೇಷ ಯೋಜನೆ ರೂಪಿಸಲಾಗಿದೆ’ ಎಂದು ಇಎಸ್‌ಐಸಿ ಪ್ರಾದೇಶಿಕ ನಿರ್ದೇಶಕ ಮನೋಜ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ 35 ಲಕ್ಷದಷ್ಟು ಕಾರ್ಮಿಕರು ಇಎಸ್‌ಐ ನೋಂದಣಿ ಹೊಂದಿದ್ದು, 1.40 ಕೋಟಿ ಮಂದಿ ಅದರ ವ್ಯಾಪ್ತಿಯಲ್ಲಿದ್ದಾರೆ. ಈ ಮೊದಲು, ನೋಂದಣಿ ಮಾಡಿಸದೇ ಇದ್ದ ಉದ್ಯೋಗದಾತರಿಂದ ವಂತಿಗೆ ಹಿಂಬಾಕಿ ವಸೂಲಿ ಮಾಡಲಾಗುತ್ತಿತ್ತು. ಈಗ ಹಿಂಬಾಕಿ ಇಲ್ಲದೆಯೇ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
ಉದ್ಯೋಗ ಪ್ರೋತ್ಸಾಹ ಯೋಜನೆ: ‘ಮೊದಲ ಬಾರಿಗೆ ಉದ್ಯೋಗ ಪಡೆದು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯಲ್ಲಿ (ಇಪಿಎಫ್‌ಒ) ನೋಂದಣಿ ಮಾಡಿಸಿದವರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯು ಇದೇ ಆಗಸ್ಟ್ 1ರಿಂದ ಜಾರಿಯಾಗಲಿದೆ’ ಎಂದು ಮನೋಜ್ ಕುಮಾರ್ ಅವರು ತಿಳಿಸಿದರು.
‘ಮೊದಲ ಬಾರಿಗೆ ಮಾಸಿಕ ₹15,000 ವೇತನ ಪಡೆದವರು ಯೋಜನೆಯ ಪ್ರಯೋಜನ ಪಡೆಯಬಹುದು. ಮೊದಲ ವೇತನ ಪಡೆದ ದಿನದಿಂದ 2 ವರ್ಷದವರೆಗೆ ಪ್ರೋತ್ಸಾಹ ಧನ ಸಿಗಲಿದೆ. ಯೋಜನೆ ಯಶಸ್ವಿಯಾದರೆ, ಇನ್ನೂ ಎರಡು ವರ್ಷ ವಿಸ್ತರಣೆಯಾಗಲಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.