ADVERTISEMENT

ರೈತರಿಗೆ ಭೂಮಿ ಕಳೆದುಕೊಳ್ಳುವ ಭೀತಿ

ಮೀಸಲು, ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಭೂಮಿ ಮಂಜೂರು

ಈರಪ್ಪ ಹಳಕಟ್ಟಿ
Published 9 ಜನವರಿ 2019, 19:07 IST
Last Updated 9 ಜನವರಿ 2019, 19:07 IST
ಕಡೆಶಿಗೇನಹಳ್ಳಿ ರೈತರು ತಮ್ಮ ಬಳಿ ಇರುವ ಪಹಣಿ ಪ್ರದರ್ಶಿಸಿದರು.
ಕಡೆಶಿಗೇನಹಳ್ಳಿ ರೈತರು ತಮ್ಮ ಬಳಿ ಇರುವ ಪಹಣಿ ಪ್ರದರ್ಶಿಸಿದರು.   

ಚಿಕ್ಕಬಳ್ಳಾಪುರ: ಜಿಲ್ಲೆಯ ಮೀಸಲು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಸಾಗುವಳಿ ಮಾಡಿ ಬಗರ್‌ ಹುಕುಂ ಯೋಜನೆಯಡಿ ಭೂಮಿ ಮಂಜೂರು ಮಾಡಿಸಿಕೊಂಡಿರುವ ರೈತರಿಗೆ ಈಗ ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ಸುಮಾರು 4 ಸಾವಿರ ಎಕರೆ ಅರಣ್ಯ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಲು ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕ್ಕಬಳ್ಳಾಪುರ ತಾಲ್ಲೂಕಿನ ತೌಡನಹಳ್ಳಿ, ಕಡೆಶಿಗೇನಹಳ್ಳಿಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು.

ಆಗ ರೈತರು ‘ಈ ಜಮೀನು ನಮಗೆ ಮಂಜೂರಾಗಿದೆ. ಪಹಣಿ ನಮ್ಮ ಹೆಸರಿನಲ್ಲಿ ಇದೆ’ ಎಂದು ತೆರವು ಕಾರ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ
ದ್ದರು. ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದರು. ಇದರಿಂದ ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆ ಸ್ಥಗಿತವಾಗಿತ್ತು.

ADVERTISEMENT

ಬಳಿಕ ದಾಖಲೆಗಳನ್ನು ಪರಿಶೀಲಿಸಿದಾಗ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ನಡೆಸಿದ ಪ್ರದೇಶ ಕಂದಾಯ ಇಲಾಖೆ ದಾಖಲೆಗಳಲ್ಲಿ ಸರ್ಕಾರಿ ಬಂಜರು ಭೂಮಿ ಎಂದು ನಮೂದಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅದು ಮೀಸಲು ಅರಣ್ಯ, ಅದನ್ನು ಬೇರೆಯವರಿಗೆ ಮಂಜೂರು ಮಾಡುವುದು, ಪಹಣಿ ನೀಡುವುದು ಕಾನೂನು ಬಾಹಿರ ಎಂದು ಹೇಳುತ್ತಿದ್ದಾರೆ. ಈ ಎರಡು ಇಲಾಖೆಯ ನಡುವಿನ ಸಮನ್ವಯದ ಕೊರತೆ ಇದೀಗ ರೈತರಿಗೆ ಸಂಕಷ್ಟ ತಂದಿಟ್ಟಿದೆ.

‘ಯಾವುದೇ ಅರಣ್ಯ ಪ್ರದೇಶವನ್ನು ಕೇಂದ್ರ ಸರ್ಕಾರ ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಿದ ಬಳಿಕ ಆ ಪ್ರದೇಶದ ಜಮೀನನ್ನು ಯಾವುದೇ ವ್ಯಕ್ತಿ, ಸಂಸ್ಥೆಗೆ ಮಂಜೂರು ಮಾಡುವುದು ಕಾನೂನುಬಾಹಿರ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್.

‘ಕಡೆಶಿಗೇನಹಳ್ಳಿಯಲ್ಲಿ ಸರ್ವೇ ನಂಬರ್ 14, 15, 16 ರಲ್ಲಿರುವ ಕೋಲಾರ ಸಾಂಬಾರ್ ಗಿಡದ ಕಾವಲು ಪ್ರದೇಶದಲ್ಲಿ 540 ಎಕರೆ ಒತ್ತುವರಿ ಆಗಿದೆ. ಅದಕ್ಕೆ ಸಂಬಂಧಿಸಿದಂತೆ 2016ರಲ್ಲಿ 16 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ರೈತರು ತಮ್ಮ ಬಳಿ ಪಹಣಿಗಳಿವೆ. ನಾವು ಭೂಮಿ ಬಿಡುವುದಿಲ್ಲ ಎನ್ನುತ್ತಿದ್ದಾರೆ. ತಹಶೀಲ್ದಾರ್ ಯಾವ ರೀತಿ ಪಹಣಿ ಕೊಟ್ಟಿದ್ದಾರೋ ಗೊತ್ತಿಲ್ಲ’ ಎಂದು ತಿಳಿಸಿದರು.

‘ರೈತರ ಬಳಿ ಇರುವ ಪಹಣಿ ಎಷ್ಟರ ಮಟ್ಟಿಗೆ ಮಾನ್ಯತೆ ಹೊಂದಿದೆ ಎಂಬುದು ಪ್ರಶ್ನೆಯಾಗುತ್ತದೆ. ತಹಶೀಲ್ದಾರ್‌ ಅವರ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದರು.

ಈ ಬಗ್ಗೆ ತಹಶೀಲ್ದಾರ್ ನರಸಿಂಹಮೂರ್ತಿ ಅವರನ್ನು ಪ್ರಶ್ನಿಸಿದರೆ, ‘ಮೀಸಲು ಅರಣ್ಯ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂ
ಚನೆಯ ಪ್ರತಿಯನ್ನು ಅರಣ್ಯ ಇಲಾಖೆಯವರು ಕಂದಾಯ ಇಲಾಖೆಗೆ ನೀಡಿ ದಾಖಲೆ ತಿದ್ದುಪಡಿ ಮಾಡಿಸಬೇಕಿತ್ತು. ಆದರೆ ಆ ಕೆಲಸ ಮಾಡಿಲ್ಲ. ಅರಣ್ಯ ಇಲಾಖೆ ಹೇಳುತ್ತಿರುವ ಮೀಸಲು ಅರಣ್ಯ ನಮ್ಮ ದಾಖಲೆಗಳಲ್ಲಿ ಸರ್ಕಾರಿ ಬಂಜರು ಭೂಮಿ ಎಂದಿದೆ’ ಎಂದು ಹೇಳಿದರು.

‘ಈ ಪ್ರಕರಣಗಳನ್ನು ನ್ಯಾಯಾಲಯವೇ ತೀರ್ಮಾನ ಮಾಡಬೇಕು. ಈವರೆಗೆ ಕಡೆಶಿಗೇನಹಳ್ಳಿಯ 30 ರೈತರು ತಮ್ಮಲ್ಲಿ ಪಹಣಿಗಳಿವೆ ಎಂದು ಹೇಳುತ್ತಿದ್ದಾರೆ. ಅವರಿಗೆ ಪುರ್ನವಸತಿ ಕಲ್ಪಿಸಲು ಸುಮಾರು 40 ಎಕರೆ ಜಮೀನು ಹುಡುಕಲು ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ’ ಎಂದು ತಿಳಿಸಿದರು.

ಮೀಸಲು ಅರಣ್ಯ ಪ್ರದೇಶ ಮಂಜೂರು ಮಾಡಿ, ಪಹಣಿ ನೀಡಲು ಅವಕಾಶವಿಲ್ಲ. ಅಕ್ರಮ ಮಂಜೂರಾತಿ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇವೆ.
-ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.