ಹಾಸನ: ಜಾರಿ ನಿರ್ದೇಶನಾಲಯ(ಇ.ಡಿ) ಬಿಜೆಪಿಯ ಪೊಲಿಟಿಕಲ್ ವಿಂಗ್, ಪೊಲಿಟಿಕಲ್ ಟೂಲ್ ಕಿಟ್ ಆಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
ಬುಧವಾರ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಭೂಕುಸಿತ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇ.ಡಿಯವರು ಬಂದು, ತಪ್ಪು ಮಾಡುವವರಿಗೆ ರಕ್ಷಣೆ ಕೊಡ್ತೀವಿ. ನೀವು ಸಿಎಂ ಮೇಲೆ ಹೇಳಿಕೆ ಕೊಡಿ ಎನ್ನುತ್ತಾರೆ. ತಪ್ಪು ಮಾಡಿರುವವರನ್ನು ರಕ್ಷಣೆ ಮಾಡಿ, ಹಗರಣ ಮುಚ್ಚಿ ಹಾಕಿ, ಸಿಎಂ ತಲೆಗೆ ಕಟ್ಟಬೇಕು ಎನ್ನುವುದು ಅವರ ಉದ್ದೇಶ’ ಎಂದು ಆರೋಪಿಸಿದರು.
ಹಗರಣದ ಹಿಂದೆ ಇರುವವರನ್ನು ಪತ್ತೆ ಮಾಡಿ ಶಿಕ್ಷೆ ಕೊಡಲು ಅವರು ಬಂದಿಲ್ಲ. ಈ ಹಗರಣವನ್ನು ಉಪಯೋಗಿಸಿಕೊಂಡು ರಾಜ್ಯದಲ್ಲಿರುವ ಸರ್ಕಾರವನ್ನು ಬುಡಮೇಲು ಮಾಡಬೇಕು ಎನ್ನುವುದೇ ಅವರ ಉದ್ದೇಶ ಎಂದರು.
ಬೇರೆ ರಾಜ್ಯಗಳಲ್ಲಿ ಇದೇ ರೀತಿ ಇ.ಡಿ ಉಪಯೋಗಿಸಿಕೊಂಡು ಸರ್ಕಾರ ಅಸ್ಥಿರಗೊಳಿಸಿದ್ದಾರೆ. ಕರ್ನಾಟಕದಲ್ಲಿ ತನಿಖಾ ಸಂಸ್ಥೆಯನ್ನು ಉಪಯೋಗಿಸಿಕೊಂಡು, ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಕುತಂತ್ರದಿಂದ ಹೊರಟಿದ್ದಾರೆ. ಚುನಾವಣೆ ಮುಗಿದ ಮೇಲೆ ಏನಾದರೂ ಮಾಡಿ ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದು ದೂರಿದರು.
ಕಲ್ಲೇಶ ಎನ್ನುವ ಅಧಿಕಾರಿಗೆ ಸಿಎಂ ವಿರುದ್ಧ ಹೇಳಿಕೆ ಕೊಡು, ಕೊಡಲಿಲ್ಲ ಎಂದರೆ ಏಳು ವರ್ಷ ಜೈಲು ಹಾಕ್ತಿವಿ ಎಂದು ಹೆದರಿಸುತ್ತಿದ್ದಾರೆ. ನೀನು ಹೇಳಿಕೆ ಕೊಟ್ಟರೆ ನಾವೇ ರಕ್ಷಣೆ ಕೊಡ್ತೀವಿ ಎಂದು ಬಲವಂತದ ಮೇಲೆ ಹೇಳಿಕೆಗಳನ್ನು ಕೊಡಿಸುವ ಮೂಲಕ ಸರ್ಕಾರವನ್ನು ಬೀಳಿಸಲು ಹೊರಟಿದ್ದಾರೆ. ಇ.ಡಿ ಅಧಿಕಾರಿ ಮೇಲೆ ಎಫ್ಐಆರ್ ಕೂಡ ಆಗಿದೆ. ಅದನ್ನು ಅಲ್ಲಿಗೆ ಬಿಟ್ಟು ಈಗ ರಾಜಭವನ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ನಮ್ಮ ವರಿಷ್ಠರ ಜೊತೆ ಮಾತುಕತೆ, ಸಂಪರ್ಕ ಹೊಂದಾಣಿಕೆ ಇವೆಲ್ಲ ಇದ್ದೇ ಇರುತ್ತದೆ. ಆ ದೃಷ್ಟಿಯಲ್ಲಿ ವರಿಷ್ಠರನ್ನು ಭೇಟಿ ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.