ADVERTISEMENT

‘ಇಂಗ್ಲಿಷ್‌’ ಶಾಲೆ: ಮರು ಪರಿಶೀಲನೆಗೆ ಆಗ್ರಹ

ಪ್ರೊ.ಜಿ.ಎಸ್‌.ಜಯದೇವ ಅವರಿಗೆ ಗಾಂಧಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 18:31 IST
Last Updated 2 ಅಕ್ಟೋಬರ್ 2019, 18:31 IST
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರೊ. ಜಿ.ಎಸ್ ಜಯದೇವ ಅವರಿಗೆ ‘ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ 2019’ ನೀಡಿ ಗೌರವಿಸಿದರು. (ಎಡದಿಂದ) \ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ, ಸಚಿವ ಸಿ.ಟಿ ರವಿ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ -ಇದ್ದರು ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರೊ. ಜಿ.ಎಸ್ ಜಯದೇವ ಅವರಿಗೆ ‘ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ 2019’ ನೀಡಿ ಗೌರವಿಸಿದರು. (ಎಡದಿಂದ) \ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ, ಸಚಿವ ಸಿ.ಟಿ ರವಿ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ -ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗಿರುವ ಇಂಗ್ಲಿಷ್‌ ಮಾಧ್ಯಮ ಕಲಿಕೆಯನ್ನು ಮರು ಪರಿಶೀಲಿಸಬೇಕು’ ಎಂದು ಗಾಂಧಿ ಚಿಂತಕ ಪ್ರೊ.ಜಿ.ಎಸ್‌.ಜಯದೇವ ಆಗ್ರಹಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ಬುಧವಾರ, ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಕರ್ನಾಟಕ–2019’ ಸ್ವೀಕರಿಸಿ ಮಾತನಾಡಿದ ಅವರು, ‘ಸಾವಿರ ಶಾಲೆಗಳಲ್ಲಿನ ಇಂಗ್ಲಿಷ್‌ ಕಲಿಕೆ ಹೇಗೆ ಸಾಗಿದೆ ಎಂಬುದರ ಬಗ್ಗೆ ತಟಸ್ಥ ಸಮಿತಿಯಿಂದ ಸಮೀಕ್ಷೆ ನಡೆಸಬೇಕು’ ಎಂದರು.

‘ಇಂಗ್ಲಿಷ್‌ ಕೇವಲ ಕೌಶಲ ಕಲಿಸುವ ಭಾಷೆಯೇ ಹೊರತು ಮಕ್ಕಳನ್ನು ಮೂಲಭೂತವಾಗಿ ಪರಿವರ್ತಿಸುವುದಿಲ್ಲ. ಹಾಗಂತ ನಾನು ಇಂಗ್ಲಿಷ್‌ ವಿರುದ್ಧವಲ್ಲ. ಆದರೆ, ಇಂಗ್ಲಿಷ್‌ನಲ್ಲಿ ಕಲಿಯುತ್ತಿ
ರುವ ಮಕ್ಕಳು ನೆಲಮೂಲ ಸಂಸ್ಕೃತಿ ಮರೆತಿದ್ದಾರೆ. ಮನುಷ್ಯರ ಅಂತರಂಗ ತಟ್ಟುವ ಮತ್ತು ನಮ್ಮ ನೆಲದ ನಂಬಿಕೆ, ಮೌಲ್ಯಗಳನ್ನು ಜೀವನದುದ್ದಕ್ಕೂ ಪಾಲಿಸುವ ಗುಣದಿಂದ ದೂರವಾಗುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಭಾರತದ ಒಟ್ಟು ಜನಸಂಖ್ಯೆಯಲ್ಲಿ 44 ಕೋಟಿ ಮಕ್ಕಳಿದ್ದರೆ ಅವರ ಕಲ್ಯಾಣಕ್ಕಾಗಿ ಸರ್ಕಾರ ಮೀಸಲಿರಿಸಿರುವ ಹಣ ಶೇ 4ರಷ್ಟು ಮಾತ್ರ. ಇದು ನಮ್ಮ ವ್ಯವಸ್ಥೆ ಮಕ್ಕಳ ಬಗ್ಗೆ ಹೊಂದಿರುವ ತಾತ್ಸಾರಕ್ಕೆ ಬಹುದೊಡ್ಡ ಉದಾಹರಣೆ’ ಎಂದರು.

ಕಾಂಗ್ರೆಸ್‌ ವಿಸರ್ಜನೆ: ಪ್ರಶಸ್ತಿ ಪ್ರದಾನ ಮಾಡಿದ ಬಿ.ಎಸ್.ಯಡಿಯೂರಪ್ಪ, ‘ಕಾಂಗ್ರೆಸ್‌ ಅನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ ಎಂದು ಗಾಂಧೀಜಿ ಕಾಂಗ್ರೆಸ್ಸಿಗರಿಗೆ ಸ್ವಾತಂತ್ರ್ಯ ಬಂದ ದಿನವೇ ಕಿವಿಮಾತು ಹೇಳಿದ್ದರು. ಇಂದು ಆ ಮಾತನ್ನು ನೆನಪಿಸಿಕೊಂಡರೆ ದೇಶದ ಭವಿಷ್ಯದ ಚಿಂತನೆ ಬಗ್ಗೆ ಅವರು ಹೊಂದಿದ್ದ ದೂರದೃಷ್ಟಿ ಅರ್ಥವಾಗುತ್ತಿದೆ’ ಎಂದರು.

ಸರಳತೆಗೆ ಪ್ರಶಸ್ತಿ

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾ. ಬಿ.ಎಸ್.ಪಾಟೀಲ ಮಾತನಾಡಿ, ‘ಜಯದೇವ ಅವರು ವಿವೇಕಾನಂದ ಗಿರಿಜನ ಕಲ್ಯಾಣ ಸಂಸ್ಥೆ ಏಳಿಗೆಗೆ ದುಡಿಯುತ್ತಿದ್ದಾರೆ. ದೀನಬಂಧು ಟ್ರಸ್ಟ್‌ ಗೌರವ ಕಾರ್ಯದರ್ಶಿಯಾಗಿ ಗಾಂಧಿ ಚಿಂತನೆ, ಸರಳ ಬದುಕು ನಡೆಸುತ್ತಾ ಮಾದರಿಯಾಗಿದ್ದಾರೆ’ ಎಂದರು.

‘ಸಂಸ್ಥೆಗೆ ಅಗತ್ಯವಾದ 7 ಎಕರೆ ಜಮೀನು ಮಂಜೂರಾತಿಗೆ ಜಿಲ್ಲಾಡಳಿತ ಒಪ್ಪಿಗೆ ಕೊಟ್ಟಿದ್ದರೂ ಇನ್ನು ಮಂಜೂರು ಆಗಿಲ್ಲ’ ಎಂಬ ಜಯದೇವ ಅಹವಾಲಿಗೆ ಯಡಿಯೂರಪ್ಪ ಆಘಾತ ವ್ಯಕ್ತಪಡಿಸಿದರು. ‘ನಾಳೆ ಅಥವಾ ನಾಡಿದ್ದು ಜಮೀನು ಮಂಜೂರು ಮಾಡಲು ಎಲ್ಲ ಕ್ರಮ ಕೈಗೊಳ್ಳುವುದಾಗಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.