ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆ ಕೈಬಿಡಲು ಆಗ್ರಹ

ಪರಿಸರ ಕಾರ್ಯಕರ್ತರು, ಪರಿಸರ ತಜ್ಞರು ಸೇರಿ 120ಮಂದಿಯಿಂದ ಕೇಂದ್ರ ಪರಿಸರ ಸಚಿವರಿಗೆ, ಮುಖ್ಯಮಂತ್ರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 11:35 IST
Last Updated 8 ಜುಲೈ 2020, 11:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಪರಿಸರ ತಜ್ಞರು, ಪರಿಸರವಾದಿಗಳು ಹಾಗೂ ಈ ರೈಲ್ವೆ ಮಾರ್ಗ ಹಾದು ಹೋಗುವ ಜಿಲ್ಲೆಗಳ ನಿವಾಸಿಗಳೂ ಒಳಗೊಂಡಂತೆ 120 ಮಂದಿ ಸೇರಿ ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮುಖ್ಯಸ್ಥರಿಗೂ ಪತ್ರ ಬರೆದಿರುವ ಈ ತಜ್ಞರ ಗುಂಪು ಈ ಯೋಜನೆಯಿಂದ ಮುಂದೊದಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸಿದೆ. ಲಕ್ಷಗಟ್ಟಲೆ ವರ್ಷಗಳಲ್ಲಿ ರೂಪುಗೊಂಡ ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆಯನ್ನು ನಾಶಪಡಿಸಿದರೆ, ಅದಕ್ಕೆ ಪರ್ಯಾಯವನ್ನು ರೂಪಿಸಲಾಗದು ಎಂದು ನೆನಪಿಸಿದೆ.

ಈ ರೈಲ್ವೆ ಮಾರ್ಗ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಮೂಲಕ ಹಾದುಹೋಗಲಿದ್ದು, ಇಲ್ಲಿನ 1.58 ಲಕ್ಷ ಮರಗಳಿಗೆ ಕುತ್ತು ತರಲಿದೆ. ಈ ಯೋಜನೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ ಎರಡನೇ ವಿಚಾರಣೆ ರಾಜ್ಯದ ಹೈಕೋರ್ಟ್‌ನಲ್ಲಿ ಇದೇ ಜುಲೈ 14ರಂದು ನಡೆಯಲಿದೆ.

ADVERTISEMENT

ರಾಜ್ಯ ವನ್ಯಜೀವಿ ಮಂಡಳಿಯು ತನ್ನ ಹಿಂದಿನ ನಿಲುವನ್ನು ಬದಲಾಯಿಸಿ 2020ರ ಮಾರ್ಚ್ 20ರಂದು ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ಮಂಡಳಿಯ ನಿರ್ಣಯಗಳಿಗೆ ಹೈಕೋರ್ಟ್‌ ಜೂನ್‌ 18ರಂದು ತಡೆಯಾಜ್ಞೆ ನೀಡಿತ್ತು.

ಪತ್ರಕ್ಕೆ ಸಹಿ ಹಾಕಿರುವ ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯೆ ಅನಿಂದ್ಯಾ ಸಿನ್ಹ ಪ್ರಕಾರ, ಈ ಯೋಜನೆ ಅನುಷ್ಠಾನಗೊಳ್ಳಲಿರುವ ಪ್ರದೇಶವು ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟವು (ಐಯುಸಿಎನ್‌) ಕೆಂಪು ಪಟ್ಟಿಯಲ್ಲಿ ಗುರುತಿಸಿರುವ 300ಕ್ಕೂ ಅಧಿಕ ಪ್ರಭೇದಗಳ ಜೀವಿಗಳಿಗೆ ನಲೆ ಒದಗಿಸಿದೆ. ಅವುಗಳಲ್ಲಿ ಅನೇಕ ಪ್ರಭೇದಗಳು ಅಪಾಯದಂಚಿನಲ್ಲಿವೆ ಹಾಗೂ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಪ್ರಭೇದಗಳ ಜೀವಿಗಳಿಗೆ ರಕ್ಷಣೆ ಒದಗಿಸುವುದು ಸರ್ಕಾರದ ಕರ್ತವ್ಯ.

‘ಇಲ್ಲಿನ ಕಾಡುನಾಶದಿಂದ ಮಳೆ ಬೀಳುವಿಕೆ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಭೂ ಸವಕಳಿ ಹೆಚ್ಚಲಿದೆ. ಇಂಗಾಲದ ಸ್ಥಿರೀಕರಣವೂ ಏರುಪೇರಾಗಬಲ್ಲುದು. ಇದರಿಂದ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಭವಿಷ್ಯದಲ್ಲಿ ಎದುರಿಸಬೇಕಾಗಬಹುದು’ ಎಂದು ಬೆಂಗಳೂರಿನ ಪರಿಸರ ತಜ್ಞೆ ಹರಿಣಿ ನಾಗೇಂದ್ರ ಅವರು ಎಚ್ಚರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯವರದ ಪರಿಸರ ಸಂಶೋಧಕ ಓಂಕಾರ್‌ ಪೈ, ‘ಈ ಯೋಜನೆಯಿಂದ ಸ್ಥಳೀಯರಿಗೆ ಹೆಚ್ಚಿನ ಅನುಕೂಲಗಳೇನೂ ಆಗುವುದಿಲ್ಲ. ಏಕೆಂದರೆ, ಇಲ್ಲಿ ನಿರ್ಮಿಸುವ ಹಳಿಗಳಲ್ಲಿ ಪ್ರಯಾಣಿಕ ರೈಲು ಓಡಿಸುವುದಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ನೀಡಿಲ್ಲ’ ಎಂದು ನೆನಪಿಸಿದ್ದಾರೆ.

‘ಈ ಯೋಜನೆಗಾಗಿ ಇಲ್ಲಿನ ಕಾಡು ನಾಶವಾದರೆ ಕೇರಳದಲ್ಲಿ ಹಾಗೂ ಕರ್ನಾಟಕದಲ್ಲಿ ಕೆಲವಡೆ ಪಶ್ಚಿಮ ಘಟ್ಟದಲ್ಲಿ ಪ್ರವಾಹ ಹಾಗೂ ಭೂಕುಸಿತ ಆದಂತೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ದುರಂತಗಳು ಸಂಭವಿಸಬಹುದು. ಈ ಯೋಜನೆಯಿಂದ ಕಾಳಿ ನದಿ ಹಾಗೂ ಗಂಗವಲ್ಲಿ ನದಿಗಳ ಜಲಾನಯನ ‍ಪ್ರದೇಶಗಳ ಮೇಲೂ ಪರಿಣಾಮ ಉಂಟಾಗಲಿದೆ. ಈ ಪ್ರದೇಶದಲ್ಲಿ ಈಗಾಗಲೇ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಕಂಡುಬರುತ್ತಿದ್ದು, ಅದು ಮತ್ತಷ್ಟು ಬಿಗಡಾಯಿಸಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ಕುಣಬಿ ಬುಡಕಟ್ಟು ಜನಾಂಗಕ್ಕೆ ಸೇರಿರುವ ವನ್ಯಜೀವಿ ಸಂರಕ್ಷಕ ಡಾ.ಜಯಾನಂದ ದೇರೇಕರ್‌, ‘ಗೌಳಿ, ಸಿದ್ಧಿ, ಕುಣಬಿ, ಹಾಲಕ್ಕಿ ಒಕ್ಕಲಿಗ ಮುಂತಾದಕಾಡು ವಾಸಿ ಬುಡಕಟ್ಟು ಜನರು ಜೇನು, ಮೇಣ, ಸೀಗೆಕಾಯಿ ಮುಂತಾದ ಕಾಡುತ್ಪನ್ನ ಸಂಗ್ರಹಿಸುವುದಕ್ಕೂ ಈ ರೈಲ್ವೆ ಯೋಜನೆಯಿಂದ ಪರಿಣಾಮ ಉಂಟಾಗಲಿದೆ. ಈ ಯೋಜನೆಗಾಗಿ ನಾಶವಾಗಲಿರುವ ಕಾಡಿನ ಆರ್ಥಿಕ ಮೌಲ್ಯ ₹ 297 ಕೋಟಿ (ಪ್ರತಿ ವರ್ಷಕ್ಕೆ) ಎಂದು ಅಂದಾಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಹಿರಿಯ ಪರಿಸರ ತಜ್ಞೆ ದಿವ್ಯಾ ಮುದ್ದಪ್ಪ, ‘ಈ ಯೋಜನೆಯು ಪಶ್ಚಿಮಘಟ್ಟದ ಪರಿಸರದ ಮೇಲೆ ಉಂಟುಮಾಡುವ ಹಾನಿಗೆ ಪ್ರತಿಯಾಗಿ ಬೇರೆ ಕಡೆ ಮರಗಳನ್ನು ಬೆಳೆಸಿ ಪರಿಹಾರ ಒದಗಿಸಲು ಸಾಧ್ಯವೇ ಇಲ್ಲ. ಜಗತ್ತಿನ ಜೈವಿಕ ಸೂಕ್ಷ್ಮ ಪ್ರದೇಶಗಳಲ್ಲಿ (ಹಾಟ್‌ಸ್ಪಾಟ್‌) ಒಂದಾದ ಪಶ್ಚಿಮಘಟ್ಟವು ಮರಗಳು ಮಾತ್ರವಲ್ಲ ಸಣ್ಣ ಗಿಡಗಳು, ಬಳ್ಳಿಗಳು, ಕೀಟಗಳು, ಅಣಬೆಗಳು, ಸಸ್ತನಿಗಳು, ಹಕ್ಕಗಳು ಮುಂತಾದ ಜೀವಿಗಳ ಸಂಕೀರ್ಣ ವ್ಯವಸ್ಥೆಯನ್ನು ಹೊಂದಿದೆ. ಕಾಡಿನ ಸಂಕೀರ್ಣ ಜೈವಿಕ ವ್ಯವಸ್ಥೆಯ ಕಾರ್ಯನಿರ್ವಹೆಣೆಗೆ ಈ ಎಲ್ಲ ಪ್ರಭೇದಗಳ ಅಂತರಸಂಬಂಧಗಳೂ ಬಲುಮುಖ್ಯ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

‘ಬಳ್ಳಾರಿಯಿಂದ ಪಶ್ಚಿಮ ಕರಾವಳಿಗೆ ಕಬ್ಬಿಣದ ಅದಿರನ್ನು ಸಾಗಿಸಲು ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯನ್ನು ಮೊದಲು ಪ್ರಸ್ತಾಪಿಸಲಾಗಿತ್ತು. ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಗೆ ಸ್ಥಗಿತಗೊಂಡಿದ್ದರಿಂದ ಈ ಯೋಜನೆಯನ್ನು ಈಗ ಅನುಷ್ಠಾನಗೊಳಿಸುವುದರಲ್ಲಿ ಅರ್ಥವೇ ಇಲ್ಲ. ಈಗಿನ ಸಂಚಾರ ಹಾಗೂ ಸಾಗಣೆಯ ಅಗತ್ಯಗಳನ್ನು ಪೂರೈಸಲು ಈ ಪ್ರದೇಶದಲ್ಲಿರುವ ಅನ್ಯ ಮಾರ್ಗಗಳು ಧಾರಾಳ ಸಾಕು’ ಎಂದು ಧಾರವಾಡದ ನಿವೃತ್ತ ಅಧಿಕಾರಿ ಬಸವರಾಜ ಬಾಗೇವಾಡಿ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಈ ಹಿಂದೆ ನಡೆದಿರುವ ಹಸಿರು ಬೆಳೆಸುವ ಕಾರ್ಯಕ್ರಮಗಳು ಹೇಗೆ ವಿಫಲವಾಗಿವೆ ಎಂಬುದನ್ನೂ ಪತ್ರದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.