ADVERTISEMENT

‘ನೇಮಕಾತಿ ಸ್ಥಗಿತದಿಂದ ಅನ್ಯಾಯ’–ಈಶ್ವರ್‌ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 17:13 IST
Last Updated 18 ಮೇ 2022, 17:13 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ಸ್ಥಗಿವಾಗಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಟ್ಟು ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ವೃಂದದ (371–ಜೆ ಮೀಸಲಾತಿ) 30,000 ಹುದ್ದೆಗಳಿವೆ. ಉಳಿದಂತೆ 20,000 ಹುದ್ದೆಗಳು ಈ ಭಾಗದ ಅಭ್ಯರ್ಥಿಗಳಿಗೆ ದೊರಕುತ್ತವೆ. ನೇಮಕಾತಿಗಳು ನಡೆಯದೇ ಇರುವುದರಿಂದ ಕಲ್ಯಾಣ ಕರ್ನಾಟಕ ಭಾಗದ 50,000 ಅಭ್ಯರ್ಥಿಗಳು ಉದ್ಯೋಗ ವಂಚಿತರಾಗುವಂತಾಗಿದೆ’ ಎಂದರು.

ವಿವಿಧ ಇಲಾಖೆಗಳಲ್ಲಿ ಪ್ರಾರಂಭವಾಗಿದ್ದ ನೇಮಕಾತಿ ಪ್ರಕ್ರಿಯೆಗಳು ಹಗರಣ ಮತ್ತಿತರ ಕಾರಣಗಳಿಂದ ಸ್ಥಗಿತಗೊಂಡಿವೆ. ಕೆಲವು ನೇಮಕಾತಿ ಪ್ರಕ್ರಿಯೆಗಳಲ್ಲಿ ಮೊದಲು ಮೆರಿಟ್‌ ವೃಂದದ ಆಯ್ಕೆಪಟ್ಟಿ ಸಿದ್ಧಪಡಿಸದೇ ಉಳಿದ ವೃಂದಗಳ ಆಯ್ಕೆಪಟ್ಟಿ ಸಿದ್ಧಪಡಿಸಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಅವಕಾಶ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ADVERTISEMENT

ಕಲ್ಯಾಣ ಕರ್ನಾಟಕ ಮೀಸಲಾತಿಯಡಿ ಆಯ್ಕೆ ಪ್ರಕ್ರಿಯೆ ನಡೆಸುವ ಕುರಿತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2016ರಲ್ಲಿ ಸುತ್ತೋಲೆ ಹೊರಡಿಸಿತ್ತು. ಅದನ್ನು ಈಗ ಪಾಲಿಸುತ್ತಿಲ್ಲ. 2016 ಸುತ್ತೋಲೆಯಂತೆ ನೇಮಕಾತಿ ನಡೆಸದಿದ್ದರೆ ಕಲ್ಯಾಣ ಕರ್ನಾಟಕ ಭಾಗದ ಯುವಜನರಿಗೆ ತೀವ್ರ ಅನ್ಯಾಯವಾಗುತ್ತದೆ. ಹೊಸ ಸುತ್ತೋಲೆಯನ್ನು ಹಿಂಪಡೆದು ವಾರದೊಳಗೆ ಆದೇಶ ಹೊರಡಿಸದಿದ್ದರೆ ಆ ಭಾಗದಲ್ಲಿ ಬೃಹತ್‌ ಹೋರಾಟ ನಡೆಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಗಳೂ ಕಾಗದದ ಮೇಲಷ್ಟೇ ಉಳಿದಿವೆ. ಘೋಷಣೆಯಾದಷ್ಟು ಅನುದಾನವನ್ನು ಬಳಕೆ ಮಾಡುತ್ತಿಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.