ADVERTISEMENT

ಕೇರಳ ಮೃಗಾಲಯಕ್ಕೆ ಕರ್ನಾಟಕದ ನೈಪುಣ್ಯ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:01 IST
Last Updated 12 ಜೂನ್ 2025, 16:01 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

– ‍ಪ್ರಜಾವಾಣಿ ಚಿತ್ರ

ಬೆಂಗಳೂರು: ಕೇರಳದ ತ್ರಿಶೂರ್‌ ಜಿಲ್ಲೆಯ ಪುಥೂರ್‌ನ ನೂತನ ಜೈವಿಕ ಉದ್ಯಾನದಲ್ಲಿ (ಮೃಗಾಲಯ) ವನ್ಯಜೀವಿ ಮತ್ತು ಪಕ್ಷಿಗಳ ನಿರ್ವಹಣೆಗೆ ಅಗತ್ಯವಾದ ತಾಂತ್ರಿಕ ನೈಪುಣ್ಯ ವಿನಿಮಯಕ್ಕೆ ಕರ್ನಾಟಕ ಅರಣ್ಯ ಇಲಾಖೆ ಸಮ್ಮತಿಸಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ADVERTISEMENT

ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಕೇರಳ ಅರಣ್ಯ ಸಚಿವ ಎ.ಕೆ. ಸಶೀಂದ್ರನ್‌ ಜತೆ ಮಾತುಕತೆ ನಡೆಸಿದ ನಂತರ ಅವರು ಮಾಹಿತಿ ನೀಡಿದರು.

‘ವನ್ಯಜೀವಿಗಳ ನಿರ್ವಹಣೆಗೆ ತಾಂತ್ರಿಕ ನೈಪುಣ್ಯವನ್ನು ಹಂಚಿಕೊಳ್ಳುವಂತೆ ಕೇರಳ ಸಚಿವರು ಮನವಿ ಮಾಡಿದ್ದಾರೆ. ಕರ್ನಾಟಕದ ಮೃಗಾಲಯಗಳಲ್ಲಿ ಹೆಚ್ಚುವರಿಯಾಗಿರುವ ಕೆಲ ವನ್ಯಜೀವಿಗಳನ್ನು ನೀಡುವಂತೆಯೂ ಕೋರಿದ್ದಾರೆ. ಪರಿಭಾವಿತ ಅರಣ್ಯದ ಬಗ್ಗೆ ಕೈಗೊಂಡಿರುವ ಕ್ರಮಗಳು, ಕಸ್ತೂರಿ ರಂಗನ್‌ ವರದಿಯ ನಿರ್ಣಯಗಳ ಕುರಿತು ಸಮಾಲೋಚನೆ ನಡೆಸಿದೆವು’ ಎಂದರು.

ಕೇರಳ ಸರ್ಕಾರ 136.8 ಎಕರೆಯಲ್ಲಿ ರಾಜ್ಯದ ಪ್ರಥಮ ಜೈವಿಕ ಉದ್ಯಾನ ಆರಂಭಿಸುತ್ತಿದೆ. ಮೃಗಾಲಯ ವಿನ್ಯಾಸಕಾರ ಆಸ್ಟ್ರೇಲಿಯಾದ ಜಾನ್‌ ಸಿಯೋ ವಿನ್ಯಾಸ ಮಾಡಿದ್ದಾರೆ. ಸಾರ್ವಜನಿಕರಿಗೆ ಆಗಸ್ಟ್‌ನಿಂದ ಉದ್ಯಾನದ ಬಾಗಿಲು ತೆರೆಯಲಿದೆ ಎಂದು ಸಶೀಂದ್ರನ್ ಮಾಹಿತಿ ನೀಡಿದರು.

ಕೇರಳ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕ ಪ್ರಮೋದ್‌ ಜಿ ಕೃಷ್ಣನ್‌, ಕರ್ನಾಟಕ ಅರಣ್ಯ ಇಲಾಖೆ ಪ್ರಮುಖ ಅಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಾಲ್ಕಡೆ, ಸುನೀಲ್‌ ಪನ್ವಾರ್, ಸೂರ್ಯ ಸೇನ್‌ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.