ADVERTISEMENT

ಮನೆಯಲ್ಲೇ ಪ್ರತ್ಯೇಕವಿದ್ದರೆ ಎಲ್ಲರೂ ಕ್ಷೇಮ

‍ಪ್ರತ್ಯೇಕವಾಸ: ಮಾರ್ಗಸೂಚಿ ಹೇಳುವುದೇನು?

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 4:12 IST
Last Updated 26 ಮಾರ್ಚ್ 2020, 4:12 IST
   
""

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ವರದಿಯಾದ ಕೊವಿಡ್‌–19 ಪ್ರಕರಣಗಳಲ್ಲಿ ವಿದೇಶದಿಂದ ಬಂದವರು ಹಾಗೂ ಅವರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿಯೇ ಸೋಂಕು ಪ್ರಕರಣ ವರದಿಯಾದ ದೇಶಗಳಿಂದ ಬಂದವರನ್ನು ಗುರುತಿಸಿ, ಅವರ ಕೈಗಳಿಗೆ ರಬ್ಬರ್‌ ಸ್ಟಾಂಪ್‌ ಮೂಲಕ ಮುದ್ರೆಗಳನ್ನು ಹಾಕಲಾಗುತ್ತಿದೆ. ಕಡ್ಡಾಯವಾಗಿ 14 ದಿನ ಮನೆಯಲ್ಲಿಯೇ ಪ್ರತ್ಯೇಕವಾಸ ಮಾಡಲು ಸೂಚಿಸಲಾಗುತ್ತಿದೆ.

ಪ್ರತ್ಯೇಕವಾಸದ ಅವಧಿಯ ಮುದ್ರೆ ಹಾಕಿಕೊಂಡವರಲ್ಲಿ ಕೆಲವರು ಬೀದಿಗಳಲ್ಲಿ ತಿರುಗಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಅವರ ಜತೆಗೆ ಸುತ್ತಮುತ್ತಲಿನ ಜನರೂ ಈ ಸೋಂಕಿನಿಂದ ಬಳಲುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ’ವು ಮನೆಯಲ್ಲಿಯೇ ಪ್ರತ್ಯೇಕ ಇರಬೇಕಾದವರಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಅದರ ಅನುಸಾರ 14 ದಿನಗಳ ಅವಧಿಯಲ್ಲಿ ಯಾರೊಂದಿಗೂ ನೇರ ಸಂಪರ್ಕ ಹೊಂದಿರಬಾರದು.

ಮಾರ್ಗಸೂಚಿಯಲ್ಲಿ ಇರುವ ಅಂಶಗಳು:

ADVERTISEMENT

– ಪ್ರತ್ಯೇಕ ವಾಸದ ಅವಧಿಯಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ವರದಿ ಮಾಡಿಕೊಳ್ಳಬೇಕು

– ಪ್ರತ್ಯೇಕ ಶೌಚಾಲಯ ಇರುವ ಕೊಠಡಿಯಲ್ಲಿ ಇರಬೇಕು

– ಮನೆಯಿಂದ ಹೊರಗಡೆ ಹೋಗಬಾರದು. ಕುಟುಂಬದ ಸದಸ್ಯರೊಂದಿಗೂ ಅಂತರ ಕಾಯ್ದುಕೊಳ್ಳಬೇಕು

–ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸಿದರೂ ಕನಿಷ್ಠ 2 ಮೀಟರ್ ಅಂತರ ಇಟ್ಟುಕೊಳ್ಳಬೇಕು

– ಮನೆಗಳಿಗೆ ಸಂದರ್ಶಕರು ಬರುವುದನ್ನು ತಡೆಯಬೇಕು

– ಬಾಯಿ, ಕಣ್ಣು, ಮೂಗನ್ನು ಮುಟ್ಟಿಕೊಳ್ಳಬಾರದು

– ಮುಖಗವಸು ಧರಿಸಿರಬೇಕು. ಆಗಾಗ ಸ್ಯಾನಿಟೈಸರ್‌ನಿಂದ ಕೈಗಳನ್ನು ತೊಳೆದುಕೊಳ್ಳಬೇಕು

– ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಬಳಕೆ ಮಾಡಬೇಕು

– ಎಲ್ಲೆಂದರಲ್ಲಿ ಉಗುಳುವ ಹವ್ಯಾಸ ರೂಢಿಸಿಕೊಳ್ಳಬಾರದು

– ಮಕ್ಕಳು, ವೃದ್ಧರು, ಗರ್ಭಿಣಿಯರಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು

–ಯಾವುದೇ ಸಾರ್ವಜನಿಕ ಸಭೆ, ಸಮಾರಂಭದಲ್ಲಿ ಭಾಗವಹಿಸಬಾರದು

–6ರಿಂದ 8 ಗಂಟೆಗೊಮ್ಮೆ ಮಾಸ್ಕ್‌ ಬದಲಿಸಬೇಕು

–ಬಳಸಿದ ಮಾಸ್ಕ್‌ಗಳನ್ನು ಮುಚ್ಚಳವಿರುವ ಕಸದ ತೊಟ್ಟಿಯಲ್ಲಿ ಹಾಕಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು

–14 ದಿನಗಳ ಅವಧಿಯಲ್ಲಿ ಜ್ವರ, ಕೆಮ್ಮು, ನೆಗಡಿಯಾದರೆ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸಬೇಕು

ಆರೋಗ್ಯ ಸಹಾಯವಾಣಿ:104 ಅಥವಾ 080 66692000/ 46848600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.