ADVERTISEMENT

₹6,000 ಕೋಟಿ ಲಂಚ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು

ಮದ್ಯ ಮಾರಾಟಗಾರರಿಂದ ₹6,000 ಕೋಟಿ ಲಂಚ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 16:19 IST
Last Updated 27 ಜನವರಿ 2026, 16:19 IST
<div class="paragraphs"><p>ಸಚಿವ ಆರ್.ಬಿ. ತಿಮ್ಮಾಪುರ</p></div>

ಸಚಿವ ಆರ್.ಬಿ. ತಿಮ್ಮಾಪುರ

   

ಬೆಂಗಳೂರು: ಮದ್ಯದ ಅಂಗಡಿಗಳ ಸನ್ನದು ನೀಡಲು ಲಂಚ ಪಡೆಯುವುದರಲ್ಲಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರೂ ಭಾಗಿಯಾಗಿದ್ದು, ಸರ್ಕಾರವು ತಕ್ಷಣವೇ ಅವರ ರಾಜೀನಾಮೆ ಪಡೆಯಬೇಕು ಎಂದು ಉಭಯ ಸದನಗಳಲ್ಲೂ ವಿರೋಧ ಪಕ್ಷಗಳು ಮಂಗಳವಾರ ಪಟ್ಟು ಹಿಡಿದವು.

ಮದ್ಯ ಮಾರಾಟ ಸನ್ನದು ಪಡೆಯಲು ಮತ್ತು ಅಂಗಡಿ ನಡೆಸಲು ಅಬಕಾರಿ ಇಲಾಖೆ ಮುಖ್ಯಸ್ಥರಿಗೆ ಈವರೆಗೆ ₹6,000 ಕೋಟಿ ಲಂಚ ನೀಡಿದ್ದೇವೆ ಎಂದಿರುವ ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾದ ಎಸ್. ಗುರುಸ್ವಾಮಿ ಅವರು ನೀಡಿರುವ ಮಾಧ್ಯಮ ಹೇಳಿಕೆಯನ್ನು ಪರಿಷತ್ತಿನ ಕಲಾಪದ ವೇಳೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಸ್ತಾಪಿಸಿದರು.

ADVERTISEMENT

ಈ ವಿಷಯ ಕುರಿತು ನಿಯಮ 330ರ ಅಡಿಯಲ್ಲಿ ಅರ್ಧಗಂಟೆ ಚರ್ಚಿಸಲು ಸಭಾಪತಿ ಬಸವರಾಜ ಹೊರಟ್ಟಿ ಅವರು ಅವಕಾಶ ನೀಡಿದರು. ‘ಅಬಕಾರಿ ಇಲಾಖೆಯ ಉಪ ಆಯುಕ್ತ ₹25 ಲಕ್ಷ ಲಂಚ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮದ್ಯದಂಗಡಿಗಳು ಇಲಾಖೆಯ ಅಧಿಕಾರಿಗಳಿಗೆ ಪ್ರತಿ ತಿಂಗಳೂ ₹15,000–₹20,000 ಮಾಮೂಲು ನೀಡಬೇಕು ಎಂಬುದು ನಮಗೆ ಗೊತ್ತಾಗಿದೆ’ ಎಂದು ಆಪಾದಿಸಿದರು.

‘ಇಲಾಖೆ ಅಧಿಕಾರಿಗಳು ಮಾತನಾಡುತ್ತಾ, ‘ಸಚಿವರಿಗೆ ಕೊಡಬೇಕು. ಅವರ ಮಗನ ಮೂಲಕ ಡೀಲ್‌ ನಡೆಯುತ್ತದೆ. ಕಡಿಮೆ ಆಗಬೇಕು ಅಂದರೆ, ಸಚಿವರ ಮಗನಿಂದ ಕರೆ ಮಾಡಿಸಿ’ ಎಂದಿದ್ದಾರೆ. ಸಚಿವರ ಪಾಲುದಾರಿಕೆ ಮತ್ತು ರಕ್ಷಣೆ ಇಲ್ಲದೆ ಅಧಿಕಾರಿಗಳು ಇಷ್ಟು ಲಂಚ ಪಡೆಯುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ವಿಪರೀತ ಮಟ್ಟಕ್ಕೆ ಬೆಳೆದಿದೆ. ಹೀಗಾಗಿ ಸಚಿವ ಆರ್‌.ಬಿ.ತಿಮ್ಮಾಪುರ ಅವರ ರಾಜೀನಾಮೆಯನ್ನು ತಕ್ಷಣವೇ ಪಡೆಯಬೇಕು. ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು. ಹಾಗೆ ಮಾಡದೇ ಇದ್ದರೆ, ಮುಖ್ಯಮಂತ್ರಿಗೂ ಲಂಚದಲ್ಲಿ ಪಾಲಿದೆ’ ಎಂದು ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.

ಸಚಿವರಾದ ಎನ್‌.ಚಲುವರಾಯಸ್ವಾಮಿ, ಸಂತೋಷ್‌ ಲಾಡ್‌, ಶಿವರಾಜ ತಂಗಡಗಿ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ಛಲವಾದಿ ನಾರಾಯಣಸ್ವಾಮಿ ಅವರ ಬೆಂಬಲಕ್ಕೆ ನಿಂತ ವಿರೋಧ ಪಕ್ಷಗಳ ಸದಸ್ಯರು, ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿದರು. ಸಭಾಪತಿ ಹೊರಟ್ಟಿ ಅವರು ಕಲಾಪವನ್ನು ಮುಂದೂಡಿದರು. 

ಸಂಜೆ ನಾಲ್ಕರ ನಂತರ ಕಲಾಪ ಆರಂಭವಾದಾಗಲೂ ವಿರೋಧ ಪಕ್ಷಗಳ ಸದಸ್ಯರು ಸಚಿವ ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿದರು. ಸದನಕ್ಕೆ ಬಂದ ತಿಮ್ಮಾಪುರ ಅವರು, ಉತ್ತರಿಸಲು ಅವಕಾಶ ನೀಡಿ ಎಂದು ಸಭಾಪತಿ ಅವರಲ್ಲಿ ಕೇಳಿದರು. ಆಗ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ತಿಮ್ಮಾಪುರ ಅವರ ವಿರುದ್ಧ ಫಲಕ ಪ್ರದರ್ಶಿಸಿ ಧಿಕ್ಕಾರ ಕೂಗಿದರು.

ವಿಧಾನಸಭೆಯಲ್ಲೂ ಪ್ರತಿಧ್ವನಿ: ವಿಧಾನಸಭೆ ಕಲಾಪ ಮಂಗಳವಾರ ಬೆಳಿಗ್ಗೆ ಆರಂಭವಾಗುತ್ತಿದ್ದಂತೆ, ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರ ಆರೋಪ ಪ್ರತಿಧ್ವನಿಸಿತು. ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಚರ್ಚೆಗೆ ಪಟ್ಟುಹಿಡಿದರು.

ಅಬಕಾರಿ ಇಲಾಖೆಯಲ್ಲಿನ ಕಿರುಕುಳ ಮತ್ತು ಭ್ರಷ್ಟಾಚಾರದ ಬಗ್ಗೆ ದೂರು ನೀಡಲು ಮದ್ಯ ಮಾರಾಟಗಾರರ ಸಂಘವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಅಬಕಾರಿ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ. ಸಚಿವ ತಿಮ್ಮಾಪುರ  ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು. 

ಗದ್ದಲ ನಿಯಂತ್ರಿಸಲು ಪ್ರಯತ್ನಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ‘ನಿಯಮ 69ರ ಅಡಿ ಈ ವಿಚಾರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಪ್ರಶ್ನೋತ್ತರ ಅವಧಿಯ ನಂತರ ಈ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗುವುದು’ ಎಂದು ಭರವಸೆ ನೀಡಿದರು. ಸಭಾಧ್ಯಕ್ಷರ ಮಾತಿಗೆ ಸ್ಪಂದಿಸಿ ವಿರೋಧ ಪಕ್ಷಗಳ ಸದಸ್ಯರು ಧರಣಿ‌ ಕೈಬಿಟ್ಟರು.ಈ ವಿಷಯವನ್ನು ಬುಧವಾರ ಪ್ರಸ್ತಾಪಿಸುವುದಾಗಿ ಎಂದು ಆರ್‌.ಅಶೋಕ ಅವರು ಸಭಾಧ್ಯಕ್ಷರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.