ADVERTISEMENT

ಸಚಿವ ಪ್ರಭು ಬಿ. ಚವ್ಹಾಣ್ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ: ಶಿಕ್ಷಕ ಬಂಧನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 3:48 IST
Last Updated 6 ಆಗಸ್ಟ್ 2022, 3:48 IST
   

ಬೆಂಗಳೂರು: ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಹೊರಡಿಸಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಶಿಕ್ಷಕ ಜ್ಞಾನದೇವ್ ಜಾಧವ ಅವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

'ಬಾಗಲಕೋಟೆಯ ಜ್ಞಾನೇಂದ್ರ, 2020ರಲ್ಲಿ ಚವ್ಹಾಣ್ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಿದ್ದರು. ವೈಯಕ್ತಿಕ ಕಾರಣಕ್ಕಾಗಿ ಕೆಲಸ ತೊರೆದು ತಮ್ಮೂರಿಗೆ ಹೋಗಿದ್ದರು. ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸಿದ್ದ ಬಗ್ಗೆ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಚಿವ ಚವ್ಹಾಣ್ ಆಪ್ತರೆಂದು ಹೇಳುತ್ತಿದ್ದ ಆರೋಪಿ, ‘ಪಶುಸಂಗೋಪನಾ ಇಲಾಖೆಯಲ್ಲಿ ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳು ಖಾಲಿ ಇವೆ. ಹಣ ಕೊಟ್ಟರೆ, ಕೆಲಸ ಕೊಡಿಸುತ್ತೇನೆ’ ಎಂದಿದ್ದ. ಇದಕ್ಕೆ ಸಂಬಂಧಪಟ್ಟಂತೆ ನಕಲಿ ನೇಮಕಾತಿ ಆದೇಶವನ್ನೂ ಸಿದ್ಧಪಡಿಸಿದ್ದ ಆರೋಪಿ, ಅಭ್ಯರ್ಥಿಗಳಿಗೆ ಕಳುಹಿಸಿ ಕೊಟ್ಟಿದ್ದ.’

ADVERTISEMENT

‘ಆರೋಪಿ ಮಾತು ನಂಬಿದ್ದ 10ಕ್ಕೂ ಹೆಚ್ಚು ಅಭ್ಯರ್ಥಿಗಳು, ತಲಾ ₹ 2 ಲಕ್ಷದಿಂದ ₹5 ಲಕ್ಷ ನೀಡಿದ್ದರು. ಸಚಿವ ಹಾಗೂ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ಹೊರಡಿದ್ದ ಆದೇಶದ ಬಗ್ಗೆ ಅಭ್ಯರ್ಥಿಯೊಬ್ಬರಿಗೆ ಅನುಮಾನ ಬಂದಿತ್ತು. ಈ ಬಗ್ಗೆ ವಿಚಾರಿಸಿದಾಗ, ಆರೋಪಿ ಕೃತ್ಯ ಗೊತ್ತಾಗಿತ್ತು. ಕೆಲ ಅಭ್ಯರ್ಥಿಗಳು ವಿಧಾನಸೌಧ ಠಾಣೆಗೂ ದೂರು ನೀಡಿದ್ದರು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.