ADVERTISEMENT

ಕೊರೊನಾ ಸಾಂತ್ವನ | ಕೌಟುಂಬಿಕ ದೌರ್ಜನ್ಯ: ಪಾರಾಗುವುದು ಹೇಗೆ?

ಡಾ.ಗೀತಾ ದೇಸಾಯಿ/ ಮೇಘನಾ ಚಂದ್ರ
Published 23 ಏಪ್ರಿಲ್ 2020, 19:45 IST
Last Updated 23 ಏಪ್ರಿಲ್ 2020, 19:45 IST
ಮೇಘನಾ ಚಂದ್ರ, ಡಾ. ಗೀತಾ ದೇಸಾಯಿ
ಮೇಘನಾ ಚಂದ್ರ, ಡಾ. ಗೀತಾ ದೇಸಾಯಿ   

ಲಾಕ್‌ಡೌನ್ ನಂತರ, ಕೌಟುಂಬಿಕ ದೌರ್ಜನ್ಯ ಹೆಚ್ಚಿರುವ ಬಗ್ಗೆ ಸಾಕಷ್ಟು ಪ್ರಕರಣಗಳು ವರದಿಗಳಾಗಿವೆ. ರಾಷ್ಟ್ರೀಯ ಮಹಿಳಾ ಆಯೋಗವು ಒದಗಿಸಿರುವ ಮಾಹಿತಿ ಪ್ರಕಾರ, ಸಹಾಯವಾಣಿ (ಕೌಟುಂಬಿಕ ದೌರ್ಜನ್ಯ) ಕರೆಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಈ ದೌರ್ಜನ್ಯ ಮಹಿಳೆಯರಿಗೊಂದೇ ಸೀಮಿತವಾಗಿಲ್ಲ, ಇದರಲ್ಲಿ ಮಕ್ಕಳು ಹಾಗೂ ವೃದ್ಧರೂ ಇದ್ದಾರೆ.

ಮಹಿಳೆಯರು ಶೋಷಣೆ ಮಾಡುವವರೊಂದಿಗೆ ಲಾಕ್‌ಡೌನ್ ಕಾರಣದಿಂದ ಒಂದೇ ಸ್ಥಳದಲ್ಲಿ ಹೆಚ್ಚಿನ ಸಮಯ ಇರುವುದರಿಂದ ದೌರ್ಜನ್ಯ ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೇ ಈ ಸಮಯದಲ್ಲಿ ಸಾಂತ್ವನ ಕೇಂದ್ರಗಳನ್ನು ಸಂಪರ್ಕಿಸಲು ಅಥವಾ ತಲುಪುವುದು ಕಷ್ಟ.

ದೌರ್ಜನ್ಯವು ಕೇವಲ ದೈಹಿಕಕ್ಕೆ ಮೀಸಲಾಗಿರದೆ, ಮಾನಸಿಕ ಮತ್ತು ಲೈಂಗಿಕವಾಗಿಯೂ ಇರಬಹುದು. ಈ ರೀತಿ ದೌರ್ಜನ್ಯಕ್ಕೆ ಒಳಪಟ್ಟಿರುವ ಮಹಿಳೆಯರಿಗೆ ಮಾನಸಿಕ ಸಮಸ್ಯೆ ತಲೆದೋರಬಹುದು. ಅವರು ಖಿನ್ನತೆ, ಒತ್ತಡ ಮತ್ತು ಆಘಾತದ ನಂತರ ಬರುವ ಬೇರೆ ಮಾನಸಿಕ ಕಾಯಿಲೆಗಳಿಗೆ ಒಳಗಾಗಬಹುದು. ಈ ಪರಿಸ್ಥಿತಿಯಲ್ಲಿ ಅವರಿಗೆ ಮಾನಸಿಕ ವೇದನೆ, ಆತಂಕ, ಗಾಬರಿ, ನಿದ್ರೆ ಬಾರದಿರುವುದು,ಆಘಾತದ ಬಗ್ಗೆ ಪದೆಪದೆ ಯೋಚನೆ ಕಾಡಬಹುದು. ಈ ಮಾನಸಿಕ ತೊಂದರೆಗಳಿಂದ ಅವರಿಗೆ ಅಸಹಾಯಕ ಭಾವನೆ ಉಂಟಾಗಬಹುದು, ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾಗಬಹುದು.

ADVERTISEMENT

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದಮಹಿಳೆಯರು ಏನು ಮಾಡಬೇಕು?
* ನಿಮ್ಮ ಸ್ನೇಹಿತರು ಅಥವಾ ಕುಟುಂಬದವರನ್ನು ದೂರವಾಣಿ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಿಸಿ ನಿಮ್ಮ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸಿ.

* ನಿಮ್ಮ ಮನೆಯಲ್ಲಿ ದೌರ್ಜನ್ಯದ ಸಂದರ್ಭದಲ್ಲಿ ಸುರಕ್ಷಿತವಾದ ಒಂದು ಸ್ಥಳವನ್ನು ಗುರುತಿಸಿ. ದೌರ್ಜನ್ಯ ಹೆಚ್ಚಾದಾಗ ನೀವು ಅಲ್ಲಿ ಆಶ್ರಯ ಪಡೆಯಬಹುದು.

* ಪೊಲೀಸರ ತುರ್ತು ಸಂಪರ್ಕ ಸಂಖ್ಯೆ ಅಥವಾ ಹೆಣ್ಣುಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ.

* ತುರ್ತು ಪರಿಸ್ಥಿತಿಯಲ್ಲಿ ನೀವು ಮನೆಯಿಂದ ಹೊರಗಿರಬೇಕಾಗಿ ಬಂದರೆ ಸ್ವಲ್ಪ ನಗದು ಮತ್ತು ಬಟ್ಟೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

* ದೌರ್ಜನ್ಯದ ಬಗ್ಗೆ ದೂರವಾಣಿ ಸಂದೇಶಗಳು ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ನಿಮಗೆ ಯಾವುದೇ ಬೆದರಿಕೆಗಳು ಬಂದಿದ್ದರೆ ಆ ಪ್ರತಿಗಳನ್ನು ಉಳಿಸಿಕೊಳ್ಳಿ.

* ಈ ಹಿಂದೆ ದೌರ್ಜನ್ಯಕ್ಕೆ ಕಾರಣವಾದ ಸಂದರ್ಭವನ್ನು ಗುರುತಿಸಿ, ಸಾಧ್ಯವಾದಷ್ಟು ಅವುಗಳಿಂದ ದೂರವಿರಿ.

* ನೀವು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದರೆ ಅಥವಾ ಅಂತಹ ಪರಿಸ್ಥಿತಿಯಲ್ಲಿ ಇರುವ ಮಹಿಳೆಗೆ ಸಹಾಯ ಮಾಡಲು ಬಯಸುವುದಾದರೆ, ನೀವು ಸಹಾಯವಾಣಿಯನ್ನು ಸಂಪರ್ಕಿಸಬಹುದು.

* ಮಕ್ಕಳು ಈ ದೌರ್ಜನ್ಯವನ್ನು ನೋಡಿದ್ದಲ್ಲಿ ಅವರು ಕೂಡ ಸಹಾಯವಾಣಿಗೆ ಕರೆ ಮಾಡಬಹುದು.

* ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಫೋನ್ ಕರೆ ಮಾಡುವಾಗ ಗೌಪ್ಯತೆಯ ಕೊರತೆಯಿದ್ದರೆ, ಸ್ನೇಹಿತರು ಅಥವಾ ಸಂಬಂಧಿಗಳೊಡನೆ ಕೋಡ್ ವರ್ಡ್ (ಉದಾ: ಹಣ್ಣು, ತರಕಾರಿ ಇತ್ಯಾದಿ ಹೆಸರು) ಬಳಸಿ ಸಹಾಯ ಕೇಳಬಹುದು.

(ಸಹಾಯವಾಣಿ ಸಂಖ್ಯೆಗಳು:100, 08022943225 / 22943227
ನಿಮ್ಹಾನ್ಸ್ ಸೆಂಟರ್ ಫಾರ್ ವೆಲ್ ಬೀಯಿಂಗ್: 9480829670
ಬೆಂಬಲ: 9980660548, ಪರಿವರ್ತನ: 7676602602)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.