ADVERTISEMENT

ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ರೈತರ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 19:25 IST
Last Updated 14 ಫೆಬ್ರುವರಿ 2022, 19:25 IST
ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ 'ಕರ್ನಾಟಕ ರಾಜ್ಯ ರೈತ ಸಂಘ' ಹಾಗೂ 'ಹಸಿರು ಸೇನೆ' ಸದಸ್ಯರು ಬೆಂಗಳೂರಿನ 'ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ'ದಿಂದ ಸ್ವಾತಂತ್ರ್ಯಉದ್ಯಾನದವರೆಗೂ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು -ಪ್ರಜಾವಾಣಿ ಚಿತ್ರ
ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ 'ಕರ್ನಾಟಕ ರಾಜ್ಯ ರೈತ ಸಂಘ' ಹಾಗೂ 'ಹಸಿರು ಸೇನೆ' ಸದಸ್ಯರು ಬೆಂಗಳೂರಿನ 'ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ'ದಿಂದ ಸ್ವಾತಂತ್ರ್ಯಉದ್ಯಾನದವರೆಗೂ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದ್ದು, ಅವುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿ ರೈತರು ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.

‘ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ನೇತೃತ್ವದಲ್ಲಿ ‘ವಿಧಾನಸೌಧ ಮುತ್ತಿಗೆ’ ಹೋರಾಟ ಹಮ್ಮಿಕೊಳ್ಳಲಾಗಿತ್ತು. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಜಿಲ್ಲೆಗಳ ರೈತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ‘ಕೃಷಿ ಕಾಯ್ದೆ ಹಿಂಪಡೆಯಿರಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಸ್ವಾತಂತ್ರ್ಯ ಉದ್ಯಾನ ಎದುರಿನ ರಸ್ತೆಯಲ್ಲಿ ಸೇರಿದ್ದ ರೈತರು, ವಿಧಾನಸೌಧದತ್ತ ಹೋಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು, ರೈತರನ್ನು ತಡೆದರು. ರಸ್ತೆಯಲ್ಲೇ ರೈತರು ಪ್ರತಿಭಟನೆ ಮುಂದುವರಿಸಿದರು.

ADVERTISEMENT

‘ರೈತ ವಿರೋಧಿ ನಿಲುವು ತಾಳಿದ್ದ ಕೇಂದ್ರ ಸರ್ಕಾರ, ಸುಗ್ರಿವಾಜ್ಞೆ ಮೂಲಕ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಇದನ್ನು ಖಂಡಿಸಿ ರೈತರು ಸುದೀರ್ಘವಾದ ಹೋರಾಟ ನಡೆಸಿದ್ದರು. ಅದಕ್ಕೆ ಮಣಿದು ಕೇಂದ್ರ ಸರ್ಕಾರ ಈಗಾಗಲೇ ಕಾಯ್ದೆಗಳನ್ನು ಹಿಂಪಡೆದಿದೆ’ ಎಂದು ಪ್ರತಿಭಟನನಿರತರು ಹೇಳಿದರು.

‘ರಾಜ್ಯ ಸರ್ಕಾರವೂ ಸುಗ್ರಿವಾಜ್ಞೆ ಮೂಲಕ ಕೃಷಿ ಕಾಯ್ದೆಗೆ ತಿದ್ದುಪಡಿಗಳನ್ನು ಜಾರಿಗೆ ತಂದಿದೆ. ಇವುಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದೂ ಎಚ್ಚರಿಸಿದರು.

ಖರೀದಿ ಕೇಂದ್ರ ಬಂದ್‌ನಿಂದ ಸಂಕಷ್ಟ: ‘ರಾಗಿ, ಭತ್ತ, ತೊಗರಿ, ಗೋವಿನಜೋಳ ಖರೀದಿ ಕೇಂದ್ರಗಳನ್ನು ಏಕಾಏಕಿ ಬಂದ್ ಮಾಡಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು
ಪ್ರತಿಭಟನಕಾರರು ದೂರಿದರು.

***

ಕೃಷಿ ಕಾಯ್ದೆಗಳನ್ನು ಅಧಿವೇಶನದಲ್ಲಿ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಅಧಿವೇಶನದ ಪಟ್ಟಿಯಲ್ಲಿ ಈ ವಿಷಯವನ್ನೇ ಅವರು ಪ್ರಸ್ತಾಪಿಸಿಲ್ಲ.

-ಕೋಡಿಹಳ್ಳಿ ಚಂದ್ರಶೇಖರ್,ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.