ADVERTISEMENT

ರೈತ ಸಹಾಯಕ ಆ್ಯಪ್‌: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ವರದಿ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ವರದಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 20:45 IST
Last Updated 24 ಮಾರ್ಚ್ 2023, 20:45 IST
‘ರೈತ ಸಹಾಯಕ’ ಆ್ಯಪ್‌ನಲ್ಲಿ ಆಹಾರೋತ್ಪನ್ನದ ವರದಿ
‘ರೈತ ಸಹಾಯಕ’ ಆ್ಯಪ್‌ನಲ್ಲಿ ಆಹಾರೋತ್ಪನ್ನದ ವರದಿ   

ಬೆಂಗಳೂರು: ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ, ಆಹಾರೋತ್ಪನ್ನದ ಗುಣಮಟ್ಟದ ವರದಿ ನೀಡುವ ‘ರೈತ ಸಹಾಯಕ’ ಮೊಬೈಲ್ ಆ್ಯಪ್ ನಗರದಲ್ಲಿ ಶುಕ್ರವಾರ ಲೋಕಾರ್ಪಣೆಯಾಯಿತು.

ರಾಜ್ಯ ಸರ್ಕಾರದ ಸಹಯೋಗದಲ್ಲಿ ಎಕೋಚಾಯ್ಸ್ ನ್ಯಾಚುರಲ್ಸ್ ಸಂಸ್ಥೆ ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಆರ್. ಶ್ರೀನಿವಾಸ್, ‘ಆ್ಯಪ್‌ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಆಹಾರೋತ್ಪನ್ನಗಳ ವರದಿಯು 30 ಸೆಕೆಂಡ್‌ಗಳಲ್ಲಿ ಸಿದ್ಧಗೊಳ್ಳಲಿದೆ. ಸ್ಥಳಕ್ಕೆ ಭೇಟಿ ನೀಡಿ,
ಆಹಾರೋತ್ಪನ್ನಗಳನ್ನು ಪರಿಶೀಲಿಸಬೇಕಾದ ಅಗತ್ಯತೆವಿಲ್ಲ. ರೈತರು ಮೊಬೈಲ್‌ ಫೋನ್‌ಗಳ ನೆರವಿನಿಂದ ಛಾಯಾಚಿತ್ರ ತೆಗೆದು, ಆಹಾರೋತ್ಪನ್ನದ ಗುಣಮಟ್ಟವನ್ನು ಅಳೆಯಬಹುದಾಗಿದೆ. ಈ ಆ್ಯಪ್‌ನಿಂದ ಮಧ್ಯವರ್ತಿಗಳ ಹಾವಳಿಯೂ ತಪ್ಪಲಿದ್ದು, ರೈತರಿಗೆ ಉತ್ತಮ ಬೆಲೆ ಸಿಗಲಿದೆ. ಗ್ರಾಹಕರೂ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಬಹುದು’ ಎಂದು ಹೇಳಿದರು.

ADVERTISEMENT

ಸಂಸ್ಥೆಯ ಸಹ ಸಂಸ್ಥಾಪಕಿ ಲಕ್ಷ್ಮೀಪ್ರಿಯಾ, ‘ಗುಣಮಟ್ಟದ ವರದಿಯ ಫಲಿತಾಂಶದ ಆಧಾರದ ಮೇಲೆ ಆಹಾರೋತ್ಪನ್ನಗಳನ್ನು ವಿಂಗಡಿಸಲಾಗುತ್ತದೆ. ಶೇ 85ಕ್ಕಿಂತ ಹೆಚ್ಚಿನ ಗುಣಮಟ್ಟ ಹೊಂದಿದ್ದಲ್ಲಿ ಉತ್ತಮ ಗುಣಮಟ್ಟದ ಆಹಾರೋತ್ಪನ್ನ ಎಂದು ನಿರ್ಧರಿಸಲಾಗುತ್ತದೆ. ಈ ಆ್ಯಪ್‌ನ ನೆರವಿನಿಂದ ಗ್ರಾಹಕರು ತಮ್ಮ ಬೇಡಿಕೆಯನ್ನು ಸಲ್ಲಿಸಬಹುದು. ಗುಣಮಟ್ಟದ ವರದಿಯು ಆಹಾರೋತ್ಪನ್ನ ಹಾಳಾಗಿರುವುದು, ಹುಳು ಬಿದ್ದಿರುವುದು, ಬೇಳೆ ಕಾಳುಗಳು ತೂತು ಬಿದ್ದಿರುವುದು, ತೇವಾಂಶ ಸೇರಿ ಎಲ್ಲ ಮಾಹಿತಿಯನ್ನು ಒಳಗೊಂಡಿರಲಿದೆ’ ಎಂದು ತಿಳಿಸಿದರು.

ವಿಜಯಪುರದ ರೈತ ಶಿವಾನಂದ, ‘ಈ ಮೊದಲು ಮೂರು ನಾಲ್ಕು ರೈತರು ಒಟ್ಟಾಗಿ ಬೇಳೆ ಕಾಳುಗಳನ್ನು ಮಾರುತ್ತಿದ್ದೆವು. ಗುಣಮಟ್ಟ ಕಾಯ್ದು ಕೊಳ್ಳುವುದು ಕಷ್ಟವಾಗುತ್ತಿತ್ತು. ಈಗ ಆ್ಯಪ್‌ನಿಂದಾಗಿ ಸಮಸ್ಯೆ ದೂರವಾಗಿದೆ. ಮಧ್ಯವರ್ತಿಗಳ ಸಹಾಯವಿಲ್ಲದೆಯೇ ಮಾರಾಟ ಮಾಡುತ್ತಿದ್ದು, ಉತ್ತಮ ಬೆಲೆ ಸಿಗುತ್ತಿದೆ’ ಎಂದು ಸಂತಸ
ವ್ಯಕ್ತಪಡಿಸಿದರು.

ಯಾದಗಿರಿಯ ರೈತ ಮಹಿಳೆ ಮುಸ್ಕಾನ್, ‘ಈ ಆ್ಯಪ್‌ ರೈತರಿಗೆ ಸಹಕಾರಿಯಾಗಿದ್ದು, ತೊಗರಿ, ಕಡಲೆ ಸೇರಿ ವಿವಿಧ ಬೇಳೆ ಕಾಳುಗಳ ಮಾರಾಟ ಸುಲಭವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.