ADVERTISEMENT

ಬರ ಬೀಳಲಿ ಎಂಬುದೇ ರೈತರ ಬಯಕೆ: ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ರೈತರ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 11:16 IST
Last Updated 25 ಡಿಸೆಂಬರ್ 2023, 11:16 IST
ಶಿವಾನಂದ ಪಾಟೀಲ
ಶಿವಾನಂದ ಪಾಟೀಲ   

ಬೆಳಗಾವಿ: ‘ಮೇಲಿಂದ ಮೇಲೆ ಬರ ಬೀಳಲಿ ಎಂದು ರೈತರು ನಿರೀಕ್ಷೆ ಮಾಡುತ್ತಾರೆ. ಬರಗಾಲ ಬಂದರೆ ಸಾಲ ಮನ್ನಾ ಆಗುತ್ತದೆ ಎಂದು ಬಯಸುತ್ತಾರೆ. ಈ ರೀತಿ ಬಯಸಬಾರದು’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ಇದರ ವಿಡಿಯೊ ತುಣುಕು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಅಥಣಿ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಹಕಾರ ಸಂಘದ ಬೆಳ್ಳಿ ಮಹೋತ್ಸವದಲ್ಲಿ ಮಾತನಾಡಿದ ಸಚಿವ, ‘ಕೃಷ್ಣಾ ನದಿಯಿಂದ ಪುಕ್ಕಟೆ ನೀರು ಸಿಗುತ್ತಿದೆ. ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಈವರೆಗೆ ಮುಖ್ಯಮಂತ್ರಿ ಆದವರೆಲ್ಲ ಉಚಿತವಾಗಿ ಬೀಜ– ಗೊಬ್ಬರ ನೀಡಿದ್ದಾರೆ. ಸದ್ಯ ರೈತರಿಗೆ ಇರುವುದು ಬರಗಾಲ ಬರಲಿ ಎಂಬ ಆಸೆ ಮಾತ್ರ’ ಎಂದು ಸಚಿವ ಹೇಳಿದ್ದಾರೆ.

‘ರೈತರು ಬಯಸಿದರೂ ಬಯಸದಿದ್ದರೂ ಮೂರು ವರ್ಷಕ್ಕೊಮ್ಮೆ ಬರಗಾಲ ಬಂದೇ ಬರುತ್ತದೆ. ಈ ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಡ್ಡಿ ಮನ್ನಾ ಮಾಡುವ ಹೇಳಿಕೆ ನೀಡಿದ್ದಾರೆ. ರೈತರು ಇಂಥ ನಿರೀಕ್ಷೆ ಇಟ್ಟುಕೊಳ್ಳಬಾರದು’ ಎಂದೂ ಅವರು ಹೇಳಿದ್ದಾರೆ.

ADVERTISEMENT

ರೈತರ ಖಂಡನೆ

ಶಿವಾನಂದ ಪಾಟೀಲ ಹೇಳಿಕೆಯನ್ನು ಖಂಡಿಸಿದ ರೈತಸಂಘದ ಚಿಕ್ಕೋಡಿಯ ಮುಖಂಡರಾದ ಮಹಾದೇವ ಮಡಿವಾಳ ಹಾಗೂ ಮಂಜುನಾಥ ಪರಗೌಡ, ‘ಸಚಿವ ರೈತರ ಕ್ಷಮೆ ಕೇಳಬೇಕು’ ಎಂದೂ ಆಗ್ರಹಿಸಿದ್ದಾರೆ.

‘ಶಿವಾನಂದ ಪಾಟೀಲ ಕೂಡ ರೈತನ ಮಗ. ಬರಗಾಲ ಬೀಳಲಿ ಎಂದು ಅವರು ತಂದೆ ಪ್ರಾರ್ಥಿಸಿದ್ದರೇ ಎಂದು ಕೇಳಿಕೊಳ್ಳಲಿ. ಕೃಷ್ಣಾ ನದಿಯನ್ನು ಪುಕ್ಕಟೆ ನೀರು ಎಂದು ಹೇಳಬೇಡಿ. ಅದು ರೈತರ ಜೀವನಾಡಿ. ಬರದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂಥದರಲ್ಲಿ ಅವರಿಗೆ ಧೈರ್ಯ ಹೇಳುವುದನ್ನು ಬಿಟ್ಟು ಗೇಲಿ ಮಾಡಿದ್ದು ಖಂಡನಾರ್ಹ’ ಎಂದೂ ಕಿಡಿ ಕಾರಿದ್ದಾರೆ.

‘ರೈತರೆಲ್ಲರೂ ಸೇರಿ ದುಡ್ಡು ಕೊಡುತ್ತೇವೆಂದರೆ ಶಿವಾನಂದ ಪಾಟೀಲ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ?’ ಎಂದೂ ಅವರು ಪ್ರಶ್ನಿಸಿದ್ದಾರೆ.

ಶಿವಾನಂದ ಪಾಟೀಲ ಹೇಳಿಕೆ ಖಂಡನೀಯ. ಅನ್ನ ದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಸರಿಯಲ್ಲ. ಸಚಿವರು ಎಚ್ಚರಿಕೆಯಿಂದ ಮಾತನಾಡಬೇಕು
ಎಚ್‌.ಡಿ.ಕುಮಾರಸ್ವಾಮಿ,ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ
ಸಚಿವ ಶಿವಾನಂದ ಪಾಟೀಲ ರೈತರಿಗೆ ಅವಮಾನ ಮಾಡಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರೈತರ ಕ್ಷಮೆ ಕೇಳಬೇಕು
ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಶಿವಾನಂದ ಪಾಟೀಲ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾ ಮಾಡಬೇಕು
ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ

‘ರೈತರನ್ನು ಎತ್ತಿಕಟ್ಟುತ್ತಿರುವ ಬಿಜೆಪಿ’

ವಿಜಯಪುರ: ‘ಬರ ಸಂದರ್ಭದಲ್ಲಿ ಸಾಲಮನ್ನಾ ಬೇಡಿಕೆ ಸಾಮಾನ್ಯ. ಆದರೆ, ರೈತರು ಸ್ವಾವಲಂಬಿಯಾಗಿ ಬದುಕಬೇಕೆ ಹೊರತು ಸರ್ಕಾರದ ಹಣವನ್ನು ಅವಲಂಬಿಸಬಾರದು. ಸರ್ಕಾರಕ್ಕೆ ಸಾಲ ಕೊಡುವ ಮಟ್ಟಿಗೆ ಸದೃಢರಾಗಬೇಕು ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.