ADVERTISEMENT

ಧರಣಿ ನಡೆಸಿ ನೀರು ಹರಿಸಿಕೊಂಡ ರೈತರು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 19:27 IST
Last Updated 27 ಏಪ್ರಿಲ್ 2019, 19:27 IST
ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಿದ ಗುಂಡ್ಲುಪೇಟೆ ಭಾಗದ ರೈತರು ಕೆರೆಗಳಿಗೆ ನೀರು ಹರಿಸುವಂತೆ ಧರಣಿ ನಡೆಸಿದರು
ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಿದ ಗುಂಡ್ಲುಪೇಟೆ ಭಾಗದ ರೈತರು ಕೆರೆಗಳಿಗೆ ನೀರು ಹರಿಸುವಂತೆ ಧರಣಿ ನಡೆಸಿದರು   

ನಂಜನಗೂಡು: ಇಲ್ಲಿನ ಗಾಂಧಿ ಗ್ರಾಮದ ಬಳಿಯ ಪಂಪ್‌ಹೌಸ್‌ಗೆ ಶನಿವಾರ ಮುತ್ತಿಗೆ ಹಾಕಿದ ಗುಂಡ್ಲುಪೇಟೆ ತಾಲ್ಲೂಕಿನ ರೈತರು ಧರಣಿ ನಡೆಸಿ ಕೆರೆಗಳಿಗೆ ನೀರು ಹರಿಸಿಕೊಂಡಿದ್ದಾರೆ.

ಗಾಂಧಿ ಗ್ರಾಮ ಬಳಿ ಕಬಿನಿ ನದಿಯಿಂದ ನೀರೆತ್ತಿ ಗುಂಡ್ಲುಪೇಟೆ ಭಾಗದ ಕೆರೆಗಳಿಗೆ ತುಂಬಿಸುವ ಯೋಜನೆ ಪೂರ್ಣಪ್ರಮಾಣದಲ್ಲಿ ಜಾರಿಯಾ
ಗಿಲ್ಲ. ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ, ಗುಂಡ್ಲುಪೇಟೆ ಭಾಗದ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿಲ್ಲ. ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯ ಬೆಳಚಲವಾಡಿ ಕೆರೆ ಇನ್ನೂ ತುಂಬಿಲ್ಲ. ಈ ಕೆರೆ ತುಂಬಿ ಕೋಡಿ ಬಿದ್ದರೆ ಮಾತ್ರ ಇನ್ನುಳಿದ ಕೆರೆಗಳಿಗೆ ನೀರು ತಲುಪುತ್ತದೆ. ಬೇಸಿಗೆಯಾದ್ದರಿಂದ ದನ–ಕರುಗಳು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ.

‘ಕೆರೆ ತುಂಬಿದರೆ ನಮ್ಮ ಭಾಗದ ಭೂಮಿಯ ಅಂತರ್ಜಲ ಹೆಚ್ಚಿ ಕೃಷಿಗೆ, ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಕಬಿನಿ ನದಿಯಿಂದ ಕೆರೆಗಳಿಗೆ ನೀರು ಹರಿಸಬೇಕು’ ಎಂದು ರೈತರು ಒತ್ತಾಯಿಸಿದರು. ಕಾವೇರಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವೀಶ್, ನೀರೆತ್ತುವ ಯಂತ್ರಗಳನ್ನು ಚಾಲನೆ ಮಾಡಿಸಿ ನೀರು ಹರಿಸಿದ ನಂತರವಷ್ಟೇ ರೈತರು ಧರಣಿ ವಾಪಸ್ ಪಡೆದು ಗ್ರಾಮಗಳಿಗೆ ತೆರಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.