ADVERTISEMENT

ಕೊಡಗಿಗೆ ಹೊರಡಲಿದೆ ರೈತರ ದಂಡು

ನೆರೆ ಸಂತ್ರಸ್ತರಿಗೆ ಶ್ರಮದಾನದ ಮೂಲಕ ಸಹಾಯ ಮಾಡಲು ನೀಡಲು ನಿರ್ಧಾರ

ಬಾಲಕೃಷ್ಣ ಪಿ.ಎಚ್‌
Published 2 ಸೆಪ್ಟೆಂಬರ್ 2018, 19:19 IST
Last Updated 2 ಸೆಪ್ಟೆಂಬರ್ 2018, 19:19 IST
ಹೊನ್ನೂರು ಮುನಿಯಪ್ಪ
ಹೊನ್ನೂರು ಮುನಿಯಪ್ಪ   

ದಾವಣಗೆರೆ: ಕೊಡಗಿನಲ್ಲಿ ಮಳೆ ಮತ್ತು ನೆರೆಯಿಂದ ಮನೆ, ಮಠ, ಹೊಲ ಕಳೆದುಕೊಂಡು ಬೀದಿಗೆ ಬಿದ್ದವರಿಗೆ ಬದುಕು ಕಟ್ಟಿಕೊಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಹೊರಡಲಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ಸೆ.5ರಿಂದ 10 ದಿನಗಳ ಕಾಲ ಸ್ಥಳೀಯರ ಅಗತ್ಯಕ್ಕೆ ಪೂರಕವಾಗಿ ಶ್ರಮದಾನ ಮಾಡಿ ನೆರವು ನೀಡಲಿದ್ದಾರೆ.

ಪ್ರತಿ ತಾಲ್ಲೂಕಿನಿಂದ ಕನಿಷ್ಠ ಒಂದು ಲಾರಿ ಹೊರಡಲಿದೆ. ಪ್ರತಿ ಲಾರಿಯಲ್ಲಿ ತಲಾ ಹತ್ತು ಹಾರೆ, ಹತ್ತು ಗುದ್ದಲಿ, ಹತ್ತು ಪಿಕಾಸಿ, ಹತ್ತು ಬುಟ್ಟಿ ಹೀಗೆ ಕೆಲಸಕ್ಕೆ ಬೇಕಾದ ಸಾಮಗ್ರಿಗಳನ್ನು ಒಯ್ಯಲಾಗುತ್ತದೆ. ಯಾವ ರೈತನೂ ಕೈಬೀಸಿಕೊಂಡು ಬರುವಂತಿಲ್ಲ. ಒಂದು ಸಾಮಗ್ರಿಯನ್ನಾದರೂ ಹಿಡಿದುಕೊಂಡು ಬರಬೇಕು ಎಂದು ತೀರ್ಮಾನವಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ADVERTISEMENT

ನಾಲ್ಕೈದು ಸಾವಿರ ರೈತರು ಕೊಡಗಿನಲ್ಲಿ ಸೇರಲಿದ್ದಾರೆ. ಬಳಿಕ ಗುಂಪು ಗುಂಪಾಗಿ ಅಲ್ಲಿನ ಬೇರೆ ಬೇರೆ ಪ್ರದೇಶಗಳಲ್ಲಿ ಕೆಲಸ ಮಾಡಲಿದ್ದಾರೆ. ಆದರೆ ಊಟ, ವಸತಿಗೆ ಅಲ್ಲಿನ ಜನರಿಗೆ ತೊಂದರೆ ಕೊಡುವಂತಿಲ್ಲ ಸಂಘದಲ್ಲಿ ತೀರ್ಮಾನಿಸಿದ್ದೇವೆ’ ಎಂದು ಅವರು ತಿಳಿಸಿದರು.

**

ಕೊಡಗಿನಲ್ಲಿ ಮತ್ತೆ ಮಳೆ ಸುರಿಯುತ್ತಿದೆ ಎಂಬ ಮಾಹಿತಿ ಇದೆ. ಮಳೆ ಇಲ್ಲದೇ ಇದ್ದರೆ ಸೆ.5ರಿಂದ ಶ್ರಮದಾನ ಆರಂಭಗೊಳ್ಳಲಿದೆ. ಮಳೆ ಇದ್ದರೆ ಕಡಿಮೆಯಾದ ಬಳಿಕ ಶ್ರಮದಾನ ಮಾಡಲಾಗುವುದು
– ಹೊನ್ನೂರು ಮುನಿಯಪ್ಪ,ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.