ADVERTISEMENT

ಫಾಸ್ಟ್ಯಾಗ್‌ಗೆ ಸರದಿ ಸಾಲು

ಡಿಸೆಂಬರ್ 1ರಿಂದ ಕಡ್ಡಾಯ*ಟೋಲ್‌ ಗೇಟ್ ಸಿದ್ಧ* ಪ್ರಾಯೋಗಿಕ ಓಡಾಟಕ್ಕೆ ಅವಕಾಶ

ಸಂತೋಷ ಜಿಗಳಿಕೊಪ್ಪ
Published 28 ನವೆಂಬರ್ 2019, 18:58 IST
Last Updated 28 ನವೆಂಬರ್ 2019, 18:58 IST
ಫಾಸ್ಟ್ಯಾಗ್‌ ಸ್ಟಿಕ್ಕರ್ 
ಫಾಸ್ಟ್ಯಾಗ್‌ ಸ್ಟಿಕ್ಕರ್    

ಬೆಂಗಳೂರು:ಫಾಸ್ಟ್ಯಾಗ್‌ ಕಡ್ಡಾಯಕ್ಕೆ ಸಿದ್ಧವಾಗಿರುವ ಟೋಲ್‌ಗೇಟ್‌ಗಳು. ಅದರ ಪಕ್ಕವೇ ತೆರೆದಿರುವ ಪ್ರತ್ಯೇಕ ಕೌಂಟರ್‌ಗಳಲ್ಲಿ ಫಾಸ್ಟ್ಯಾಗ್‌ ಸ್ಟಿಕ್ಕರ್‌ ಪಡೆಯಲು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುತ್ತಿರುವ ಜನ. ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸುತ್ತಿರುವ ಟೋಲ್‌ಗೇಟ್‌ ಸಿಬ್ಬಂದಿ.

ಇದು ರಾಜ್ಯದ ಬಹುತೇಕ ಟೋಲ್‌ಗೇಟ್‌ಗಳಲ್ಲಿ ಕಂಡುಬರುತ್ತಿರುವ ದೃಶ್ಯ. ಫಾಸ್ಟ್ಯಾಗ್‌ ಕಡ್ಡಾಯಕ್ಕೆ ಒಂದು ದಿನ ಬಾಕಿ ಇದ್ದು, ಸ್ಟಿಕರ್‌ಗಳನ್ನು ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ವಾಹನಗಳ ಸಂಖ್ಯೆಗೆ ತಕ್ಕಂತೆ ಕೌಂಟರ್‌ಗಳನ್ನು ತೆರೆಯದಿದ್ದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಕೌಂಟರ್‌ ಎದುರು ಕಾಯುತ್ತ ನಿಲ್ಲುತ್ತಿದ್ದಾರೆ.

‘ಆಧಾರ್ ಹಾಗೂ ವಾಹನ ನೋಂದಣಿ ಪುಸ್ತಕ (ಆರ್‌.ಸಿ) ಪಡೆದು ಸ್ಟಿಕ್ಕರ್‌ ನೀಡುತ್ತಿದ್ದಾರೆ. ಕಡ್ಡಾಯವೆಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಕೌಂಟರ್‌ಗೆ ಬರುತ್ತಿದ್ದಾರೆ. ಸರದಿಯಲ್ಲಿ ಸಾಕಷ್ಟು ಹೊತ್ತು ಕಾಯಬೇಕಾಗಿದೆ. ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಟೋಲ್‌ಗೇಟ್‌ ಅಧಿಕಾರಿಗಳಿಗೆ ಹೇಳಿದ್ದೇವೆ’ ಎಂದು ಕಾರು ಮಾಲೀಕ ರಾಮಾಂಜನೇಯ ಹೇಳಿದರು.

ADVERTISEMENT

ಜಡೆಮಾಯಸಂದ್ರದ ನಿವಾಸಿ ಹನುಮಂತಪ್ಪ, ‘ಹೊಸ ಕಾರು ಖರೀದಿಸಿದ್ದ ವೇಳೆಯಲ್ಲೇ ಫಾಸ್ಟ್ಯಾಗ್ಸ್ಟಿಕ್ಕರ್‌ ಹಾಕಿಸಿದ್ದೇನೆ. ನನ್ನ ಸ್ನೇಹಿತರಿಗೆ ಫಾಸ್ಟ್ಯಾಗ್ ಕೊಡಿಸಲು ಬಂದಿದ್ದೇನೆ. ಈ ಸ್ಟಿಕ್ಕರ್‌ನಿಂದ ಸಾಕಷ್ಟು ಅನುಕೂಲ ಆಗಿದೆ. ಟೋಲ್‌ಗೇಟ್‌ನಲ್ಲಿ ಸರದಿಯಲ್ಲಿ ನಿಲ್ಲುವುದು ತಪ್ಪಲಿದೆ. ಬೇಗನೇ ಮುಂದಕ್ಕೆ ಹೋಗಬಹುದಾಗಿದೆ’ ಎಂದರು.

ಸಾಫ್ಟ್‌ವೇರ್‌ ಮೂಲಕ ನಿರ್ವಹಣೆ: ‘ಟೋಲ್‌ಗೇಟ್‌ನ ಎಲ್ಲ ಸಾಲುಗಳಲ್ಲೂ ಫಾಸ್ಟ್ಯಾಗ್‌ ಸ್ಕ್ಯಾನರ್‌ ಅಳವಡಿಸಲಾಗಿದೆ. ಈ ವ್ಯವಸ್ಥೆ ಸಾಫ್ಟ್‌ವೇರ್‌ ಮೂಲಕ ನಿರ್ವಹಣೆ ಆಗುತ್ತಿದೆ. ಇದಕ್ಕೆ ಈಗಾಗಲೇ ಉತ್ತಮ ಸ್ಪಂದನೆ ಸಿಕ್ಕಿದೆ. ಈಗ ಕಡ್ಡಾಯ ಆಗಿರುವುದರಿಂದ ಮತ್ತಷ್ಟು ಜನರಿಗೂ ಅನುಕೂಲವಾಗಲಿದೆ’ ಎಂದು ನವಯುಗ ಟೋಲ್‌ಗೇಟ್‌ನ ನಿರ್ವಹಣಾ ವ್ಯವಸ್ಥಾಪಕ ಲಕ್ಷ್ಮಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ಪ್ರತ್ಯೇಕ ಸಾಲುಗಳಲ್ಲಿ ಫಾಸ್ಟ್ಯಾಗ್ ಬಳಸಿ ಅಡೆತಡೆ ಇಲ್ಲದೆ ವಾಹನಗಳ ಓಡಾಟಕ್ಕೆ ಪ್ರಾಯೋಗಿಕವಾಗಿ ಅವಕಾಶ ಕಲ್ಪಿಸಲಾಗಿದೆ. 10 ಸೆಕೆಂಡ್‌ನಲ್ಲಿ ಸ್ಕ್ಯಾನಿಂಗ್ ಪ್ರಕ್ರಿಯೆ ಮುಗಿಯುತ್ತದೆ. ಡಿಸೆಂಬರ್ 1ರಿಂದ ಯಾವ ಸಾಲುಗಳಲ್ಲಿ ಫಾಸ್ಟ್ಯಾಗ್ ನೀಡಬೇಕು. ಯಾವ ಸಾಲುಗಳಲ್ಲಿ ನಗದು ಪಡೆಯಬೇಕು ಎಂಬುದು ತೀರ್ಮಾನವಾಗಿಲ್ಲ’ ಎಂದರು.

‘ಖಾಸಗಿ ಬಸ್‌ಗಳು, ಗೂಡ್ಸ್‌ ಸಾಗಣೆ ವಾಹನಗಳು ಈಗಾಗಲೇ ಫಾಸ್ಟ್ಯಾಗ್‌ ಬಳಕೆ ಮಾಡುತ್ತಿವೆ. ಚಾಲಕನಿಗೆ ವಾಹನಗಳನ್ನು ನೀಡುವ ಮಾಲೀಕರು ತಮ್ಮ ಖಾತೆಯಿಂದ ಹಣ ಪಾವತಿಸಲು ಈ ವ್ಯವಸ್ಥೆ ಅನುಕೂಲವಾಗಿದೆ’ ಎಂದು ಹೇಳಿದರು.

ಟೋಲ್‌ಗೇಟ್ ನಿರ್ವಹಣಾ ಏಜೆನ್ಸಿಗಳ ಜೊತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗಷ್ಟೇ ಸಭೆ ನಡೆಸಿದ್ದಾರೆ.ಫಾಸ್ಟ್ಯಾಗ್‌ ಜಾರಿಗೆ ಏನೆಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.