ADVERTISEMENT

ಮೂವರು ಸಿನಿಮಾ ತಂತ್ರಜ್ಞರು ನಿಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 19:14 IST
Last Updated 8 ಅಕ್ಟೋಬರ್ 2018, 19:14 IST
ಕೆ.ಎಂ. ವಿಷ್ಣುವರ್ಧನ್
ಕೆ.ಎಂ. ವಿಷ್ಣುವರ್ಧನ್   

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ದುಡಿದ ಮೂವರು ತಂತ್ರಜ್ಞರು ಭಾನುವಾರ ನಿಧನರಾಗಿದ್ದಾರೆ.

ಕೆ.ಎಂ. ವಿಷ್ಣುವರ್ಧನ್

‘ನೀನ್ಯಾರೆ’ ಚಿತ್ರಕ್ಕೆ ಶ್ರೇಷ್ಠ ಛಾಯಾಗ್ರಾಹಕ ಪ್ರಶಸ್ತಿ ಪಡೆದಿದ್ದ ಕೆ.ಎಂ. ವಿಷ್ಣುವರ್ಧನ್(44) ಅನಾರೋಗ್ಯದಿಂದ ನಿಧನರಾಗಿದ್ದಾರೆ.

ADVERTISEMENT

ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆಗಾಗಿ ಕರುಣಾಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಷ್ಣುವರ್ಧನ್‌ ಅವರು‌ ‘ಸ್ನೇಹಾಂಜಲಿ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದರು. ನಟರಾದ ಸುದೀಪ್ ನಟನೆಯ ‘ಹುಬ್ಬಳ್ಳಿ’, ಪ್ರಜ್ವಲ್ ದೇವರಾಜ್ ನಟನೆಯ ‘ಗುಲಾಮ’, ದರ್ಶನ್‌ ಅಭಿನಯದ ‘ಯೋಧ’, ಶಿವರಾಜ್‌ಕುಮಾರ್‌ ನಟಿಸಿದ್ದ ‘ಸುಗ್ರೀವ’, ಯಶ್ ನಟನೆಯ ‘ರಾಜಾ ಹುಲಿ’, ರವಿಚಂದ್ರನ್‌ ನಟನೆಯ ‘ನಾರಿಯ ಸೀರೆ ಕದ್ದ’, ನಟಿ ಮಾಲಾಶ್ರೀ ಅಭಿನಯದ ‘ಕನ್ನಡದ ಕಿರಣ್‌ ಬೇಡಿ’ ಸೇರಿದಂತೆ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ಮೀಸೆ ಪಾಪಣ್ಣ

‘ಮೀಸೆ ಪಾಪಣ್ಣ’ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಪ್ರೊಡಕ್ಷನ್‌ ಮ್ಯಾನೇಜರ್ ಪಾಪಣ್ಣ(60) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಎರಡು ದಶಕಗಳಿಂದ ಅವರು ಪ್ರೊಡಕ್ಷನ್‌ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ‘ಗಣೇಶನ ಮದುವೆ’ ಚಿತ್ರದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ನಟ ವಿನಯ್‌ ರಾಜ್‌ಕುಮಾರ್‌ ಅಭಿನಯದ ‘ಅನಂತು ವರ್ಸಸ್‌ ನುಸ್ರತ್’ ಚಿತ್ರಕ್ಕೂ ಅವರು ಪ್ರೊಡಕ್ಷನ್ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸಿದ್ದರು.

ಕುಮಾರ್‌ ಚಕ್ರವರ್ತಿ

ಛಾಯಾಗ್ರಾಹಕ ಕುಮಾರ್‌ ಚಕ್ರವರ್ತಿ (42) ನಿಧನರಾಗಿದ್ದಾರೆ.

ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್‌. ದಾಸ್‌ ಬಳಿ ಸಹಾಯಕರಾಗಿ ಕೆಲಸ ಆರಂಭಿಸಿದ್ದರು. ‘ಚಂದ್ರಚಕೋರಿ’, ‘ಆಪ್ತಮಿತ್ರ’ ಮತ್ತು ‘ಶಿವಲಿಂಗ’ ಚಿತ್ರದಲ್ಲಿ ದಾಸ್‌ ಅವರಿಗೆ ಸಹಾಯಕರಾಗಿ ದುಡಿದಿದ್ದರು.

‘ಎಚ್‌2ಓ’ ಚಿತ್ರದ ಮೂಲಕ ಅವರು ಸ್ಥಿರ ಛಾಯಾಗ್ರಾಹಕರಾಗಿ ಕೆಲಸ ಆರಂಭಿಸಿದರು. ಬಳಿಕ ‘ಬೌಂಡರಿ’ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಆರಂಭಿಸಿದರು. ‘ಸೂರಿ ಗ್ಯಾಂಗ್’, ‘ಕೆಂಗುಲಾಬಿ’, ‘ಚಿತ್ತ ಚಂಚಲ’ ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.