ADVERTISEMENT

ನೌಕರರ ನೇಮಕಕ್ಕೆ ‘ನಿರ್ಬಂಧ’!

ಆರ್ಥಿಕ ಇಲಾಖೆ ಒಪ್ಪಿಗೆ ಇಲ್ಲದೆ ಭರ್ತಿ ಮಾಡಿದರೆ ಅನುದಾನ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 2:29 IST
Last Updated 16 ಜನವರಿ 2020, 2:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಿಬ್ಬಂದಿ ಕೊರತೆಯಿಂದ ಕಂಗೆಟ್ಟಿರುವ ಬೆನ್ನಲ್ಲೇ, ಪೂರ್ವಾನುಮತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಬಾರದು ಎಂದು ಆರ್ಥಿಕ ಇಲಾಖೆ ಕಟ್ಟಪ್ಪಣೆ ಮಾಡಿದೆ.

ಒಂದು ವೇಳೆ ಇಲಾಖೆಯ ಸೂಚನೆ ಕಡೆಗಣಿಸಿ ನೇಮಕ ಮಾಡಿದರೆ ಅನುದಾನ ಬಿಡುಗಡೆ ಮಾಡುವುದಿಲ್ಲ ಮತ್ತು ಮಾನ್ಯತೆಯನ್ನೂ ನೀಡುವುದಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದೆ.

ಈಗಾಗಲೇ ಹಲವು ಇಲಾಖೆಗಳುಪೂರ್ವಾನುಮತಿ ಪಡೆಯದೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿವೆ. ಇದರಿಂದ ಸರ್ಕಾರಕ್ಕೆ ಅನಗತ್ಯ ಹಣಕಾಸಿನ ಹೊರೆಯಾಗಿದೆ. ಈ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕು ಎಂದು ಆರ್ಥಿಕ ಇಲಾಖೆ ಇತರ ಇಲಾಖೆಗಳಿಗೆ ಸೂಚನೆ ನೀಡಿದೆ.

ADVERTISEMENT

‘ಇನ್ನು ಮುಂದೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೂ ಮೊದಲು ಹಣಕಾಸು ಇಲಾಖೆಯ ಅನುಮತಿಗಾಗಿ ಕಡ್ಡಾಯವಾಗಿ ಪ್ರಸ್ತಾವ ಸಲ್ಲಿಸಬೇಕು. ಸಾಕಷ್ಟು ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮುಂಚಿತವಾಗಿ ಪ್ರಸ್ತಾವ ಸಲ್ಲಿಸುತ್ತಿಲ್ಲ. ಉದಾಹರಣೆಗೆ ಹೊಸ ನರ್ಸಿಂಗ್‌ ಕಾಲೇಜುಗಳು ಅಥವಾ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಿದಾಗ ಆಯಾ ಇಲಾಖೆಗಳು ಆಡಳಿತ ಹಂತದಲ್ಲೇ ಹುದ್ದೆಗಳ ನೇಮಕಾತಿ ಬಗ್ಗೆ ತೀರ್ಮಾನಿಸಿ, ಆದೇಶ ಹೊರಡಿಸಲಾಗುತ್ತಿದೆ. ಬಳಿಕವೇ ನಮ್ಮನ್ನು ಸಂಪರ್ಕಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ’ ಎಂದೂ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಕಾಬಿಟ್ಟಿ ನೇಮಕ ಮಾಡುತ್ತಿರುವುದರ ಪರಿಣಾಮ ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಗಿ, ಅನುದಾನದ ಕೊರತೆಗೂ ಕಾರಣವಾಗಿದೆ. ಇದರಿಂದ ಆರ್ಥಿಕ ಶಿಸ್ತು ಸಡಿಲಗೊಳ್ಳುತ್ತದೆ. ಆಡಳಿತದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನು ಮುಂದೆ ವಿವಿಧ ಇಲಾಖೆಗಳು ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆ, ಪ್ರಾಧಿಕಾರಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ತಮ್ಮ ಹಂತದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬಾರದು. ಹುದ್ದೆಗಳ ಸೃಜನೆ ಮತ್ತು ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಮುಂಚಿತವಾಗಿ ಸಮಾಲೋಚಿಸಬೇಕು. ಆರ್ಥಿಕ ಇಲಾಖೆಯ ಸಹಮತ ದೊರೆತ ಬಳಿಕವೇ ಆದೇಶ ಹೊರಡಿಸಬೇಕು ಎಂದು ಹೇಳಿದೆ.

‘ಹಲವು ಇಲಾಖೆಗಳು ಬೇಕಾಬಿಟ್ಟಿ ನೇಮಕ ಮಾಡಿಕೊಳ್ಳುತ್ತಿವೆ. ನೇಮಕಕ್ಕೆ ಅನುಮತಿ ಕೇಳದ ಕಾರಣಅನುದಾನ ನಿಗದಿ ಮಾಡಲುಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನೇಮಕಗೊಂಡವರಿಗೆ 6– 7 ತಿಂಗಳು ವೇತನ ಬಿಡುಗಡೆ ಮಾಡಲು ಆಗುತ್ತಿಲ್ಲ’ ಎಂದು ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಿವಿಧ ಇಲಾಖೆಗಳ ನೌಕರರ ಮಾಹಿತಿ

ವಲಯ;ಮಂಜೂರಾದ ಹುದ್ದೆಗಳು;ಭರ್ತಿಯಾದ ಹುದ್ದೆಗಳು;ಖಾಲಿ ಹುದ್ದೆಗಳು

ರಾಜ್ಯವಲಯ;3,47,985;2,15,456;1,32,529

ಜಿಲ್ಲಾವಲಯ;4,31,454;2,94,411;1,37,043

ಒಟ್ಟು;7,79,439;5,09,867,2,69,572

(2018–19ನೇ ಸಾಲಿನವರೆಗಿನ ಮಾಹಿತಿ)

ನೇಮಕದ ಪ್ರಮಾಣವೂ ಕುಸಿತ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕದ ಪ್ರಮಾಣವೂ ಕುಸಿತಗೊಳ್ಳುತ್ತಿದೆ. ಕರ್ನಾಟಕ ಆರ್ಥಿಕ ಸಮೀಕ್ಷೆಯ ಪ್ರಕಾರ ಪ್ರತಿ ಸಾವಿರ ಹುದ್ದೆಗಳಿಗೆ ಶೇ 56ರಷ್ಟು ಸಿಬ್ಬಂದಿ ನೇಮಕವಾಗಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಕುಸಿತವಾಗುತ್ತಿದೆ.

ಸಿಬ್ಬಂದಿ ಪ್ರಮಾಣ (ಸಾವಿರಕ್ಕೆ)

ವಲಯ; 2017( ಮಾರ್ಚ್‌);2018(ಜೂನ್‌)

ರಾಜ್ಯ ಸರ್ಕಾರ; 561.3;560.5

ಅರೆ ಸರ್ಕಾರಿ;157.4;161.5

ಸ್ಥಳೀಯ ಸಂಸ್ಥೆಗಳು;63.6;64.3

***

ವಿವಿಧ ಇಲಾಖೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ

-ಸಿ.ಎಸ್‌.ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.