ADVERTISEMENT

ಆರ್ಥಿಕ ನೆರವು: ವಯೋಮಿತಿ ಸಡಿಲಿಕೆಗೆ ಹೆಚ್ಚಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 30 ಮೇ 2021, 20:35 IST
Last Updated 30 ಮೇ 2021, 20:35 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಕೋವಿಡ್‌ ಹಾಗೂ ಲಾಕ್‌ಡೌನ್ ಕಾರಣ ಘೋಷಿಸಲಾಗಿರುವ ಆರ್ಥಿಕ ನೆರವಿಗೆ ವಯೋಮಿತಿಯನ್ನು ಸಡಿಲಿಸಿ, 35 ವರ್ಷದೊಳಗಿನ ಯುವ ಕಲಾವಿದರೂ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಬೇಕು ಎಂಬ ಒತ್ತಾಯ ಸಾಂಸ್ಕೃತಿಕ ವಲಯದಲ್ಲಿ ಕೇಳಿಬಂದಿದೆ.

ಸಂಕಷ್ಟಕ್ಕೆ ಸಿಲುಕಿರುವ ವಿವಿಧ ವಲಯಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿರುವ ಸರ್ಕಾರ, ಕಲಾವಿದರಿಗೆ ತಲಾ ₹ 3 ಸಾವಿರ ನೆರವು ನೀಡುತ್ತಿದೆ. ಈ ಸಂಬಂಧ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ನೆರವಿಗೆ ಸಂಬಂಧಿಸಿದಂತೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಕಲಾವಿದರು 35 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ತಿಳಿಸಲಾಗಿದೆ. ಈ ವಯೋಮಿತಿಯನ್ನು 25ಕ್ಕೆ ಇಳಿಕೆ ಮಾಡಬೇಕು ಎಂದು ಸಾಂಸ್ಕೃತಿಕ ವಲಯದ ಗಣ್ಯರು ಆಗ್ರಹಿಸಿದ್ದಾರೆ.

ಈ ಸಂಬಂಧ ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದು, ‘ಕಲಾವಿದರು ಹಾಗೂ ಕಲಾ ಸಂಸ್ಥೆಗಳು ಬೀದಿಗೆ ಬಿದ್ದಿವೆ. ನೆರವಿಗೆ ಸಂಬಂಧಿಸಿದಂತೆ ವಿಧಿಸಿರುವ ಷರತ್ತುಗಳು ಮಗುವನ್ನು ಚಿವುಟಿ, ತೊಟ್ಟಿಲನ್ನು ತೂಗುವಂತೆ ಆಗಿದೆ. ನಿಗದಿಪಡಿಸಲಾಗಿರುವ ವಯೋಮಿತಿಯನ್ನು 25ಕ್ಕೆ ಇಳಿಕೆ ಮಾಡಬೇಕು. ಅದೇ ರೀತಿ, ಅರ್ಜಿ ಹಾಕಲು ನಿಗದಿಪಡಿಸಿರುವ ದಿನಾಂಕವನ್ನು ಜೂ.10ರವರೆಗೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಅವಧಿ ವಿಸ್ತರಿಸಲು ಮನವಿ

‘ಕೆಲವು ಕಲಾವಿದರಿಗೆ ಮೊಬೈಲ್ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್ ಕಾರಣ ಈ ಪ್ರಕ್ರಿಯೆ ಸಂಬಂಧ ಹೊರಗಡೆ ಹೋಗಲು ಕೂಡ ಆಗುತ್ತಿಲ್ಲ. ಹಾಗಾಗಿ, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಬೇಕು. ವೃತ್ತಿ ಕಂಪನಿಗಳಲ್ಲಿ 35 ವರ್ಷದೊಳಗಿನ ಕಲಾವಿದರು ಕೂಡ ಇರುತ್ತಾರೆ. ಹಾಗಾಗಿ, ವಯೋಮಿತಿಯನ್ನು 25ಕ್ಕೆ ಇಳಿಕೆ ಮಾಡಬೇಕು. ಸರ್ಕಾರದ ನೆರವು ಒಪ್ಪತ್ತಿನ ಊಟಕ್ಕಾದರೂ ಆಗುತ್ತದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಮನವಿ ಮಾಡಿದ್ದಾರೆ.

‘ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶ ಮಾಡುತ್ತಾರೆ. ಕಲೆಯನ್ನು ಮುಂದುವರಿಸಿಕೊಂಡು ಹೋಗಲು ಶ್ರಮಿಸುತ್ತಿದ್ದಾರೆ. ಹಾಗಾಗಿ, ವಯೋಮಿತಿಯನ್ನು 20ಕ್ಕೆ ಇಳಿಕೆ ಮಾಡಬೇಕು. ₹ 3 ಸಾವಿರ ನೆರವು ಯುವ ಕಲಾವಿದರಿಗೆ ಆಸರೆಯಾಗಲಿದೆ’ ಎಂದು ಅಖಿಲ ಕರ್ನಾಟಕ ವೃತ್ತಿ ರಂಗಭೂಮಿ ನಾಟಕ ಕಂಪನಿಗಳ ಮಾಲೀಕರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.