ADVERTISEMENT

ಲಂಚ ಪ್ರಕರಣ: ಸಹಕಾರ ಇಲಾಖೆ ಅಧಿಕಾರಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 16:32 IST
Last Updated 13 ಜೂನ್ 2022, 16:32 IST
ಎಚ್‌.ಪಿ. ಸದಾಶಿವ
ಎಚ್‌.ಪಿ. ಸದಾಶಿವ   

ಬೆಂಗಳೂರು: ವಸತಿ ಸಮುಚ್ಚಯವೊಂದರ ಮಾಲೀಕರ ಸಂಘದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅರ್ಜಿದಾರರಿಂದ ₹ 10,000 ಲಂಚಕ್ಕೆ ಬೇಡಿಕೆ ಇಟ್ಟು, ₹ 5,000 ಪಡೆದಿದ್ದ ಪ್ರಕರಣದಲ್ಲಿ ನಗರದ ಮೂರನೇ ವಲಯದ ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್‌ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್‌.‍ಪಿ. ಸದಾಶಿವ, ‘ಅಪರಾಧಿ’ ಎಂದು ವಿಶೇಷ ನ್ಯಾಯಾಲಯ ಸಾರಿದ್ದು, ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿದೆ.

ಕೋರಮಂಗಲದ ಧನುಶ್ರೀ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದ ನೋಂದಣಿಗೆ ಯಲಹಂಕ ನಿವಾಸಿಯೊಬ್ಬರು 2017ರ ಆಗಸ್ಟ್‌ನಲ್ಲಿ ಚಾಮರಾಜಪೇಟೆಯಲ್ಲಿರುವ ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಪ್ರಕ್ರಿಯೆ ಪೂರ್ಣಗೊಳಿಸಲು ₹ 10,000 ಲಂಚ ನೀಡುವಂತೆ ಸದಾಶಿವ ಬೇಡಿಕೆ ಇಟ್ಟಿದ್ದರು. ₹ 7,500 ಲಂಚ ಪಡೆಯುತ್ತಿದ್ದಾಗ ದಾಳಿಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು, ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ಬಂಧಿಸಿದ್ದರು.

ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, ನಗರದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ 2018ರ ಸೆಪ್ಟೆಂಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಸೋಮವಾರ ಆದೇಶ ಪ್ರಕಟಿಸಿದ ನ್ಯಾಯಾಧೀಶ ಕೆ. ಲಕ್ಷ್ಮೀನಾರಾಯಣ ಭಟ್‌, ‘ಸದಾಶಿವ ಅಪರಾಧಿ’ ಎಂದು ಸಾರಿದರು.

ADVERTISEMENT

ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಪಡೆದಿರುವುದು ಎರಡೂ ಆರೋಪಗಳು ಸಾಬೀತಾಗಿವೆ ಎಂದು ಪ್ರಕಟಿಸಿದ ನ್ಯಾಯಾಲಯ, ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿ ಆದೇಶ ಹೊರಡಿಸಿತು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸಂತೋಷ್‌ ನಾಗರಲೆ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.