ADVERTISEMENT

ಧ್ವಜ ಕಂಬ ಏರಲು ಮಕ್ಕಳ ಬಳಕೆಗೆ ನಿರ್ಬಂಧ: ಶಾಲಾ ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:14 IST
Last Updated 23 ಜನವರಿ 2026, 16:14 IST
   

ಬೆಂಗಳೂರು: ಗಣರಾಜ್ಯೋತ್ಸವದ ಧ್ವಜಾರೋಹಣದ ಸಮಯದಲ್ಲಿ ಕಂಬ ಏರಲು ಮಕ್ಕಳನ್ನು ಬಳಕೆ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಹಿಂದೆ ಕೆಲವು ಶಾಲೆಗಳಲ್ಲಿನ ಧ್ವಜಸ್ತಂಭಗಳಲ್ಲಿ ಧ್ವಜ ಸಿಕ್ಕಿಹಾಕಿಕೊಂಡ ಸಮಯದಲ್ಲಿ ಮಕ್ಕಳನ್ನು ಕಂಬ ಏರಲು ಬಳಸಿಕೊಂಡು ಅನಾಹುತಗಳಾಗಿವೆ. ವಿದ್ಯುತ್‌ ತಂತಿಗಳಿಂದ ಪ್ರಾಣಕ್ಕೆ ಅಪಾಯ ಒದಗಿವೆ. ಇಂತಹ ಅವಘಡಗಳಿಗೆ ಅವಕಾಶ ನೀಡಬಾರದು. ಧ್ವಜ ಕಂಬ ಏರಲು ಮಕ್ಕಳಿಗೆ ಅವಕಾಶ ನೀಡಬಾರದು. ವಿದ್ಯುತ್‌ ಸಂಪರ್ಕಗಳನ್ನು ಸರಿಯಾಗಿ ಪರಿಶೀಲಿಸಬೇಕು. ಮಕ್ಕಳ ಕವಾಯತು, ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿವರಿಸಲಾಗಿದೆ.

ಸುವ್ಯವಸ್ಥಿತ ವಾಹನಗಳನ್ನು ಬಳಸಬೇಕು. ಚಾಲಕರು ಮದ್ಯಪಾನ ಮಾಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ವೇಗ ಮಿತಿಯ ಮೇಲೆ ನಿಗಾವಹಿಸಬೇಕು. ಕಾರ್ಯಕ್ರಮ ನಡೆಯುವ ಸ್ಥಳದಿಂದ 100 ಮೀಟರ್‌ ಅಂತರದಲ್ಲಿ ವಾಹನಗಳ ನಿಲುಗಡೆ ಮಾಡಬೇಕು. ತುರ್ತು ಪರಿಸ್ಥಿತಿ ಎದರಿಸಲು ಮಕ್ಕಳಿಗೆ ಅಗತ್ಯ ತರಬೇತಿ, ಜಾಗೃತಿ ಮೂಡಿಸಬೇಕು. ಮಕ್ಕಳ ಕಾರ್ಯಕ್ರಮ ಕುರಿತು ಸ್ಥಳೀಯ ಸಂಸ್ಥೆಗಳು, ಪೊಲೀಸ್‌, ವೈದ್ಯಕೀಯ, ಅಗ್ನಿಶಾಮಕ ಸೇವೆಗಳಿಗೆ ಮಾಹಿತಿ ನೀಡಬೇಕು. ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.