ADVERTISEMENT

ಪೈಲಟ್‌ ಇಲ್ಲದೇ ವಿಮಾನ ಹಾರಾಟ ರದ್ದು

ಮಂಗಳೂರಿನಲ್ಲಿ ಆರು ಗಂಟೆ ಕಾದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 14:39 IST
Last Updated 12 ಏಪ್ರಿಲ್ 2019, 14:39 IST
   

ಮಂಗಳೂರು: ಇಲ್ಲಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಮಧ್ಯಾಹ್ನ ಮುಂಬೈಗೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನದ ಹಾರಾಟವನ್ನು ತಾಂತ್ರಿಕ ದೋಷ ಮತ್ತು ಪೈಲಟ್‌ ಅಲಭ್ಯತೆಯ ಕಾರಣದಿಂದ ರದ್ದು ಮಾಡಿದ್ದು, ಆರು ಗಂಟೆಗೂ ಹೆಚ್ಚು ಕಾಲ ಕಾದು ಸುಸ್ತಾದ ಪ್ರಯಾಣಿಕರು ರಾತ್ರಿಯನ್ನು ನಗರದಲ್ಲೇ ಕಳೆದರು.

ಏರ್‌ ಇಂಡಿಯಾ ವಿಮಾನ ಮಧ್ಯಾಹ್ನ 12.40ಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.25ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಮುಂಬೈಯಿಂದ ಅಮೆರಿಕ, ಅಬುಧಾಬಿ, ಸ್ಯಾನ್‌ ಫ್ರಾನ್ಸಿಸ್ಕೋ ಸೇರಿದಂತೆ ವಿದೇಶಗಳಿಗೆ ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರೂ ಇದ್ದರು.

ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕಂಡಿದೆ ಎಂದು ಸಿಬ್ಬಂದಿ ಹೇಳಿದಾಗ ಪ್ರಯಾಣಿಕರು ನಂಬಿದರು. ಹೇಳಿದಂತೆ 3 ಗಂಟೆಗೆ ಬಂದಿಳಿಯುವ ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಬಿಡಿ ಭಾಗ ಬರಲಿಲ್ಲ. ಸಂಜೆ 5 ಗಂಟೆಗೆ ಬಂದಿಳಿದ ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ಬಿಡಿ ಭಾಗ ಬಂದು ತಲುಪಿತು. ಅದನ್ನು ಅಳವಡಿಸಿ ಸರಿಪಡಿಸುವಷ್ಟರಲ್ಲಿ ಪೈಲಟ್‌ ಇರಲಿಲ್ಲ. ಬಳಿಕ ಪೈಲಟ್‌ ಅಲಭ್ಯತೆಯ ಕಾರಣ ನೀಡಿ ವಿಮಾನ ಸಂಚಾರವನ್ನೇ ರದ್ದುಪಡಿಸಲಾಯಿತು. ಕೆಲವು ಪ್ರಯಾಣಿಕರು ತಕ್ಷಣವೇ ಬೇರೆ ವಿಮಾನಗಳ ಟಿಕೆಟ್‌ ಖರೀದಿಸಿ ಪ್ರಯಾಣ ಮುಂದುವರಿಸಿದರು.

ADVERTISEMENT

ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ 6 ಗಂಟೆಗೆ ಈ ಎಲ್ಲ ಪ್ರಯಾಣಿಕರನ್ನೂ ಏರ್‌ ಇಂಡಿಯಾ ವಿಮಾನದ ಮೂಲಕ ಮುಂಬೈಗೆ ಕಳುಹಿಸಿಕೊಡಲಾಯಿತು.

ಜಾಲತಾಣದಲ್ಲಿ ಆಕ್ರೋಶ:ವಿಮಾನ ಪ್ರಯಾಣ ರದ್ದುಗೊಂಡಿದ್ದರಿಂದ ತೊಂದರೆ ಅನುಭವಿಸಿದ ಪ್ರಯಾಣಿಕರು, ಅವರ ಸಂಬಂಧಿಗಳು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಏರ್‌ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯಕ್ಕೆ ಬಾರದ ಪೈಲಟ್‌ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆಯೂ ಹಲವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.