ಹುಬ್ಬಳ್ಳಿ: ‘ಉಡಾನ್’ ಯೋಜನೆಯಡಿ ಬೆಂಗಳೂರು–ಕಲಬುರ್ಗಿ–ತಿರುಪತಿ ನಡುವೆ ಶೀಘ್ರದಲ್ಲೇ ‘ಸ್ಟಾರ್ ಏರ್’ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂಜಯ್ ಘೋಡಾವತ್ ತಿಳಿಸಿದರು.
ಹುಬ್ಬಳ್ಳಿ–ಹಿಂಡನ್ ನಡುವೆ ನೇರ ವಿಮಾನಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು–ಕಲಬುರ್ಗಿ–ತಿರುಪತಿ ವಿಮಾನಯಾನ ಆರಂಭಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ಜನವರಿಗೆ ಇನ್ನೂ ಮೂರು ಹೊಸ ವಿಮಾನಗಳು ‘ಸ್ಟಾರ್ ಏರ್’ಗೆ ಸೇರ್ಪಡೆಯಾಗಲಿದೆ. ಈ ವಿಮಾನಗಳು ಹುಬ್ಬಳ್ಳಿ–ಪುಣೆ, ಬೆಳಗಾವಿ–ಇಂದೋರ್, ಬೆಳಗಾವಿ–ಕಿಶನ್‌ಗಡ, ಬೆಳಗಾವಿ–ನಾಗಪುರ, ಬೆಳಗಾವಿ–ಜೋದ್‌ಪುರ, ಬೆಳಗಾವಿ–ಜೈಪುರ ನಡುವೆ ಉಡಾನ್ ಯೋಜನೆಯಡಿ ಯಾನ ಆರಂಭಿಸಲಿವೆ ಎಂದು ತಿಳಿಸಿದರು.
ಎರಡು ವರ್ಷದ ಬಳಿಕ ಅಂತರರಾಷ್ಟ್ರೀಯ ವಿಮಾನಯಾನ ಆರಂಭಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ವಾರ ಪೂರ್ತಿ ಸಂಚಾರ:ಹುಬ್ಬಳ್ಳಿ–ಹಿಂಡನ್ ನಡುವೆ ಸದ್ಯ ವಾರದಲ್ಲಿ ಮೂರು ದಿನ (ಬುಧವಾರ, ಗುರುವಾರ, ಶನಿವಾರ) ಸಂಚಾರ ಪ್ರಾರಂಭಿಸಿರುವ ವಿಮಾನವೂ ನಾಲ್ಕು ತಿಂಗಳ ಬಳಿಕ ವಾರದ ಎಲ್ಲ ದಿನವೂ ಸಂಚರಿಸಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.