ADVERTISEMENT

ಮಳೆ, ಪ್ರವಾಹ: 15,400 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 12:41 IST
Last Updated 13 ಆಗಸ್ಟ್ 2019, 12:41 IST

ಬೆಳಗಾವಿ: ‘ವಾರದಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

‘ಜಿಲ್ಲೆಯ ಅಥಣಿ, ಕಾಗವಾಡ, ಚಿಕ್ಕೋಡಿ, ಖಾನಾಪುರ, ರಾಯಬಾಗ, ಹುಕ್ಕೇರಿ, ಮೂಡಲಗಿ, ಗೋಕಾಕ, ಖಾನಾಪುರ, ಬೆಳಗಾವಿ, ಮೂಡಲಗಿ, ಸವದತ್ತಿ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ ತಾಲೂಕುಗಳಲ್ಲಿ ಒಟ್ಟಾರೆ 374 ಗ್ರಾಮಗಳು ಪ್ರವಾಹದಿಂದ ತೊಂದರೆಗೆ ಒಳಗಾಗಿವೆ. ಇದುವರೆಗೆ ಪ್ರವಾಹದಲ್ಲಿ 13 ಜನರು ಪ್ರಾಣ ಕಳೆದುಕೊಂಡಿದ್ದು, ನಾಲ್ವರು ಕಾಣೆಯಾಗಿದ್ದಾರೆ. ಒಟ್ಟು 4,14,411 ಜನ ನೆರೆಪೀಡಿತರಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ಒಟ್ಟು 15,400 ಮನೆಗಳಿಗೆ ಭಾಗಶ: ಹಾನಿಗೆ ಒಳಗಾಗಿವೆ. 723 ಮನೆಗಳು ಸಂಪೂರ್ಣವಾಗಿ ಕುಸಿದಿವೆ. ಒಟ್ಟು 14 ತಾಲ್ಲೂಕುಗಳಲ್ಲಿ 491 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 1,84,966 ಜನರು ಆಶ್ರಯ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 1,57,301 ಹೇಕ್ಟರ್ ಬೆಳೆ ಹಾನಿಯಾಗಿದೆ. ಇಲ್ಲಿವರೆಗೆ ಮೂಲ ಸೌಕರ್ಯಗಳಾದ 2665 ಕಿ.ಮೀ. ರಸ್ತೆಗಳು, 512 ಸೇತುವೆಗಳು ಮತ್ತು ಸಿಡಿ(ಚೆಕ್ ಡ್ಯಾಂ)ಗಳು, 3,255 ಸರ್ಕಾರಿ ಕಟ್ಟಡಗಳು, 338 ಟ್ಯಾಂಕ್‌ಗಳು, 40 ಏತ ನೀರಾವರಿಗೆ ಹಾನಿಯಾಗಿದೆ. 286 ನೀರು ಸರಬರಾಜು ಮಾರ್ಗಗಳು, 5,204 ವಿದ್ಯುತ್ ಕಂಬಗಳು ಕೂಡ ಹಾನಿಗೊಳಗಾಗಿವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಅಗ್ನಿಶಾಮಕ ದಳದ 95 ಮಂದಿ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ 60, ಗೃಹರಕ್ಷಕ ದಳದ 50, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 183 ಜನರು, ಸೇನೆಯ 899 ಜನರು, ರಾಜ್ಯ ಮೀಸಲು ಪಡೆಯ 4 ತುಕಡಿಗಳವರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.