ಕಾವೇರಿ ಜಲಧಾರೆ ಸೊಬಗು......... ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯದಿಂದ ಭಾನುವಾರ 56 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದು, ಹಾಲ್ನೊರೆಯಂತೆ ಚಿಮ್ಮುತ್ತಿದ್ದ ನೀರಿನ ಸೊಬಗನ್ನು ಪ್ರವಾಸಿಗರು ಕಣ್ತುಂಬಿಕೊಂಡರು
- ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಬೆಂಗಳೂರು: ರಾಜ್ಯದ ವಿವಿಧೆಡೆ ಮುಂಗಾರು ಮಳೆ ಉತ್ತಮವಾಗಿದ್ದು, ಕಾರಣ ಬಹುತೇಕ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದ್ದು ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಇದರ ಪರಿಣಾಮ ಜಲಾಶಯಗಳಿಂದ ಹೊರ ಹರಿವಿನ ಪ್ರಮಾಣವೂ ಹೆಚ್ಚಾಗಿದ್ದು, ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿ ಆವರಿಸಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಭಿಮಾ ಮತ್ತು ಕೃಷ್ಣ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಉಜನಿ ಜಲಾಶಯದಿಂದ ಭೀಮಾನದಿಗೆ 42 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಹೀಗಾಗಿ, ನದಿ ಸುತ್ತಲಿನ ಗ್ರಾಮಸ್ಥರಿಗೆ ಕಟ್ಟೆಚ್ಚರ ವಹಿಸುವಂತೆ ಕಲಬುರಗಿಯ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಚಿಂಚೋಳಿ ತಾಲ್ಲೂಕಿನ ನಾಗರಾಳ ಜಲಾಶಯದಿಂದಲೂ ನೀರು ಹರಿಬಿಡಲಾಗುತ್ತಿದೆ.
ಆಲಮಟ್ಟಿ ಜಲಾಶಯದಲ್ಲಿ ಒಳಹರಿವು 60,160 ಕ್ಯೂಸೆಕ್ ಇದ್ದು, ಹೊರ ಹರಿವನ್ನು 1,20,000 ಕ್ಯೂಸೆಕ್‌ಗೆ ಏರಿಸಲಾಗಿದೆ. ನಾರಾಯಣಪುರ ಜಲಾಶಯಕ್ಕೆ ಒಳಹರಿವು 1,20,000 ಕ್ಯೂಸೆಕ್ ಇದ್ದು, ಹೊರ ಹರಿವು 1,23,400 ಕ್ಯೂಸೆಕ್‌ನಷ್ಟಿದೆ.
ಹಿಡಕಲ್ ಡ್ಯಾಂ ಭರ್ತಿ (ಹುಕ್ಕೇರಿ ವರದಿ):
ಬೆಳಗಾವಿ ಜಿಲ್ಲೆಯ ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಡ್ಯಾಂ) ಬಹುತೇಕ ಭರ್ತಿಯಾಗಿದೆ. ಭಾನುವಾರ ಶೇ 93ರಷ್ಟು ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ 10 ಕ್ರಸ್ಟ್‌ಗೇಟ್‌ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಯಿತು. ಗರಿಷ್ಠ 2,175 ಅಡಿ ಇರುವ ಜಲಾಶಯದ ನೀರಿನ ಮಟ್ಟ ಈಗ 2,171 ಅಡಿ ತಲುಪಿದೆ.
ಈಗಾಗಲೇ ಘಟಪ್ರಭಾ ಎಡದಂಡೆ ಕಾಲುವೆಗೆ 2,200 ಕ್ಯೂಸೆಕ್, ಚಿಕ್ಕೋಡಿ ಶಾಖಾ ಕಾಲುವೆಗೆ 400 ಕ್ಯೂಸೆಕ್, ಬಲದಂಡೆ ಕಾಲುವೆಗೆ (ಕರ್ನಾಟಕ ವಿದ್ಯುತ್ ನಿಗಮ)ಗೆ 2,850 ಕ್ಯೂಸೆಕ್, ಸ್ಪಿಲ್ ವೇಗ 7,275 ಕ್ಯೂಸೆಕ್, ಇತರೆ 175 ಕ್ಯೂಸೆಕ್ ಸೇರಿ ಒಟ್ಟು 12,900 ಕ್ಯೂಸೆಕ್ ಬಿಡಲಾಗುತ್ತಿದೆ. ಇದರೊಂದಿಗೆ ಈಗ 10 ಸಾವಿರ ಕ್ಯೂಸೆಕ್ ನೀರನ್ನು ಗೇಟ್ ಮೂಲಕ ಹರಿಸಲಾಗುತ್ತಿದೆ. ಎಲ್ಲವೂ ಸೇರಿ 22,900 ಕ್ಯೂಸೆಕ್ ಹೊರಹರಿವು ಇದ್ದರೆ ಒಳಹರಿವು 20 ಸಾವಿರ ಕ್ಯೂಸೆಕ್ ಇದೆ.
ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ನೀರಿನ ಒಳ ಹರಿವು ಹೆಚ್ಚಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುವುದು ಎಂದು ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಅರವಿಂದ ಜಮಖಂಡಿ ತಿಳಿಸಿದ್ದಾರೆ. ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿ ತಟದ ಜನರು ನೀರಿನ ಹರಿವು ಹೆಚ್ಚಾಗುವ ಮೊದಲೇ ತಮ್ಮ ದನಕರು ಜತೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಎಂಜನಿಯರ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಕೆ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಕಂಪ್ಲಿ ಸೇತುವೆ ಸಂಚಾರ ಬಂದ್ (ಗಂಗಾವತಿ ವರದಿ):
ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟಿದ್ದರಿಂದ ಭಾನುವಾರ ಕೊಪ್ಪಳ ಜಿಲ್ಲೆಯ ಗಂಗಾವತಿ–ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದ್ದು, ಈ ಮಾರ್ಗದಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಸೇತುವೆ ಮುಳುಗಡೆಯಾಗಿರುವ ಕಾರಣ ಹೊಸಪೇಟೆಯಿಂದ ಕಂಪ್ಲಿ ಮಾರ್ಗವಾಗಿ ಗಂಗಾವತಿಗೆ ಬಂದು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ತೆರಳುತ್ತಿದ್ದ ಬಸ್‌ಗಳು ಈಗ 10 ಕಿ.ಮೀ ಸುತ್ತಿಕೊಂಡು ಆನೆಗೊಂದಿ ಸಮೀಪದ ಕಡೇಬಾಗಿಲು ಮೂಲಕ ಗಂಗಾವತಿಗೆ ಬರಬೇಕಾಗಿವೆ.
ಆನೆಗೊಂದಿ ಸಮೀಪದಲ್ಲಿರುವ ವಿಜಯನಗರ ಕಾಲದ ಸೇತುವೆ, ಚಕ್ರತೀರ್ಥ, ನವವೃಂದಾವನ, ವಿರೂಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗದ ಸಂಪರ್ಕ ಕಡಿತವಾಗಿದೆ. ಆನೆಗೊಂದಿಯಲ್ಲಿರುವ ಕೃಷ್ಣದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ನೀರಿನಲ್ಲಿ ಮುಳುಗಿದೆ. ಚಿಂತಾಮಣಿ ಬಳಿಯ ಮಂಟಪ, ಬಸವಣ್ಣನ ದೇವಸ್ಥಾನ ಜಲಾವೃತವಾಗಿದೆ.
ನದಿಗೆ ಸಂಪರ್ಕಿಸುವ ಮಾರ್ಗಗಳು ಬಂದ್ (ಶ್ರೀರಂಗಪಟ್ಟಣ ವರದಿ:)
ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆ ಭಾನುವಾರ 56,474 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಪಟ್ಟಣದಲ್ಲಿ ನದಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಗ್ಗುವವರೆಗೆ ದೋಣಿ ವಿಹಾರ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೇಮಾವತಿ ಹೆಚ್ಚಿದ ಹರಿವು (ಹಾಸನ ವರದಿ):
ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹೇಮಾವತಿ ನದಿಗೆ ಒಳಹರಿವು ಹೆಚ್ಚಾಗಿದೆ. ಶನಿವಾರ ರಾತ್ರಿಯಿಂದ 46ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇನ್ನೊಂದೆಡೆ ಹಾರಂಗಿ ಜಲಾಶಯದಿಂದ ಕಾವೇರಿ ನದಿಗೆ ನೀರು ಬಿಡಲಾಗುತ್ತಿದ್ದು, ಅರಕಲಗೂಡು ತಾಲ್ಲೂಕಿನ ರಾಮನಾಥಪುರ, ಕೊಣನೂರು ಹೋಬಳಿಗಳಲ್ಲಿ ನದಿ ಉಕ್ಕಿ ಹರಿಯುತ್ತಿದೆ. ರಾಮನಾಥಪುರದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದು, ತೋಟಕ್ಕೆ ಕಾವೇರಿ ನದಿ ನೀರು ನುಗ್ಗಿದೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ತಾರಕ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಟ್ಟಿರುವುದರಿಂದ ಕಟ್ಟೇಮನುಗನಹಳ್ಳಿ ಗ್ರಾಮದ ಬಳಿಯ ಸೇತುವೆ ಮುಳುಗಡೆಯಾಗಿದೆ. ಕಪಿಲಾ ನದಿ ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿದೆ. ಮುಡಿಕಟ್ಟೆಯವರೆಗೂ ನೀರು ಬಂದಿದೆ. ಸ್ನಾನಘಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ.
ನಂಜನಗೂಡಿನ ಹಳ್ಳದಕೇರಿಯ ಐದು ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ತೋಪಿನ ಬೀದಿ, ಕುರುಬಗೇರಿ, ಒಕ್ಕಲಗೇರಿ, ಸರಸ್ವತಿ ಕಾಲೊನಿ, ರಾಜಾಜಿನಗರ, ತಮ್ಮಡಗೇರಿ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.
ಕೊಡಗಿನಲ್ಲಿ ನಿಲ್ಲದ ಗಾಳಿ ಹಲವೆಡೆ ಅಪಾರ ಹಾನಿ:
ಕೊಡಗು ಜಿಲ್ಲೆಯಲ್ಲಿ ಭಾನುವಾರ ಮಳೆ ತಗ್ಗಿದ್ದು ಬಿರುಗಾಳಿ ಬೀಸುತ್ತಲೇ ಇದೆ. ಇದರಿಂದಾಗಿ ಗ್ರಾಮ ಪಂಚಾಯಿತಿ ಕಟ್ಟಡಗಳು ಅಂಗನವಾಡಿಗಳು ಶಾಲೆಗಳು ಮನೆಗಳು ಹಾಗೂ ವಾಹನಗಳ ಮೇಲೆ ಮರಗಳು ಉರುಳುತ್ತಿವೆ. ರಸ್ತೆಗಳಲ್ಲಿ ಸಂಚರಿಸುವುದೂ ಅಪಾಯಕಾರಿಯಾಗಿ ಪರಿಣಮಿಸಿದೆ. ವಿದ್ಯುತ್ ಪೂರೈಕೆ ಕಡಿತಗೊಂಡಿದ್ದು ಹಲವು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಹವಾಮಾನ ಇಲಾಖೆಯು ಸೋಮವಾರ (ಜುಲೈ 28) ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಿದೆ. ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಯುತ್ತಿರುವುದರಿಂದ ಯಡವನಾಡು– ಹಾರಂಗಿ ಸೇತುವೆ ಮುಳುಗಡೆಯಾಗಿದೆ. ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕಣಿವೆ ಗ್ರಾಮದ ತೂಗು ಸೇತುವೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಗ್ರಾಮಸ್ಥರ ಸಂಚಾರಕ್ಕೆ ಮಾತ್ರ ಅವಕಾಶ ಕೊಡಲಾಗಿದೆ. ಶಾಂತಳ್ಳಿಯಲ್ಲಿ 23 ಹುದಿಕೇರಿ 19 ಶ್ರೀಮಂಗಲ 16 ಭಾಗಮಂಡಲ ಸೋಮವಾರಪೇಟೆ ತಲಾ 11 ಮಡಿಕೇರಿ ಸಂಪಾಜೆ ತಲಾ 10 ಸೆಂ.ಮೀ. ಮಳೆಯಾಗಿದೆ.
ಮರ ಬಿದ್ದು ಮಹಿಳೆ ಸಾವು:
ಭಾನುವಾರ ಬೀಸಿದ ಭಾರಿ ಗಾಳಿ ಮಳೆಗೆ ಇಲ್ಲಿನ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚತ್ರಪ್ಪಾಡಿಯ ದಿ.ಗೋಪಾಲ ಭಂಡಾರಿ ಅವರ ಪತ್ನಿ ರುಕ್ಮಿಣಿ ಮೃತಪಟ್ಟವರು. ಅವರು ಮನೆಯ ಅಂಗಳದಲ್ಲಿದ್ದಾಗ ಮರ ಬಿದ್ದು ಅವಘಡ ನಡೆದಿದೆ. ರುಕ್ಮಿಣಿ ಅವರು ಮನೆಯಲ್ಲಿ ಒಬ್ಬರೇ ಇದ್ದು ಇಬ್ಬರು ಪುತ್ರಿಯರು ಪುತ್ರ ಕೆಲಸದ ನಿಮಿತ್ತ ಬೇರೆ ಕಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.