ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಸೋಮವಾರ ಮಳೆ ಬಿಡುವು ಕೊಟ್ಟಿದ್ದರೂ ಪ್ರವಾಹ ಮಾತ್ರ ಇನ್ನೂ ತಗ್ಗಿಲ್ಲ. ಮೂರ್ನಾಲ್ಕು ದಿನಗಳ ಬಳಿಕ ಬಿಸಿಲು ಕಾಣಿಸಿಕೊಂಡಿತಾದರೂ ನದಿ ಪಾತ್ರದ ಜನರ ಮೊಗದಲ್ಲಿ ನೆರೆ ಭೀತಿಯ ಛಾಯೆ ಪ್ರತಿಫಲಿಸುತ್ತಿತ್ತು.
ಕಲಬುರಗಿ ಜಿಲ್ಲಾಡಳಿತವು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದು, ಭೀಮಾ ನದಿಯ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ನೆರೆಪೀಡಿತ ಗ್ರಾಮಗಳ ಹಲವು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತು. ನೆರೆ ಸಂತ್ರಸ್ತರ ಪೈಕಿ ಹಲವರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಕೆಲವರು ಪ್ರವಾಹ ತಗ್ಗುವ ನಿರೀಕ್ಷೆಯಿಂದ ಜಲಾವೃತಗೊಂಡಿರುವ ಗ್ರಾಮಗಳಲ್ಲಿರುವ ತಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಪ್ರವಾಹದ ನೀರು ಮನೆಯನ್ನು ಹೊಕ್ಕಿದ್ದರಿಂದ ಹಾವು, ಚೇಳುಗಳಂತಹ ವಿಷ ಜಂತುಗಳು ಸೇರಿಕೊಂಡ ಭೀತಿ ಸಂತ್ರಸ್ತರನ್ನು ಕಾಡುತ್ತಿದೆ.
ಮಹಾರಾಷ್ಟ್ರದ ಉಜನಿ, ವೀರ್ ಮತ್ತು ಸೀನಾ ಜಲಾಶಯಗಳಿಂದ ಸೋಮವಾರ 3.25 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಟ್ಟಿರುವುದರಿಂದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಭೀಮಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹದ ಭೀತಿ ಆವರಿಸಿದೆ. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದೊಂದಿಗೆ ಸಂಪರ್ಕಿಸುವ ಜೇವರ್ಗಿ ಸಮೀಪದ ಕಟ್ಟಿಸಂಗಾವಿ ಸಮೀಪದ ಎರಡೂ ಸೇತುವೆಗಳು ಸೋಮವಾರ ಸಂಚಾರಕ್ಕೆ ಮುಕ್ತವಾಗಿವೆ. ಎರಡು ದಿನಗಳಿಂದ ನಿಂತುಕೊಂಡಿದ್ದ ನೂರಾರು ಲಾರಿಗಳು ಸಂಚರಿಸಿದವು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕಡಬೂರು, ಜೇವರ್ಗಿ ತಾಲ್ಲೂಕಿನ ಮಂದರವಾಡ, ಕೋಬಾಳ, ಕೂಡಿ, ಕಲಬುರಗಿ ತಾಲ್ಲೂಕಿನ ಸರಡಗಿ, ಫಿರೋಜಾಬಾದ್, ನದಿ ಸಿನ್ನೂರ, ಶಹಾಬಾದ್ ತಾಲ್ಲೂಕಿನ ಹೊನಗುಂಟಾ, ಅಫಜಲಪುರ ತಾಲ್ಲೂಕಿನ ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಕೊಂಚ ಕಡಿಮೆಯಾಗಿದೆಯಾದರೂ ಜಲ ದಿಗ್ಬಂಧನ ಇನ್ನೂ ತೆರವುಗೊಂಡಿಲ್ಲ.
ಅಫಜಲಪುರದ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ 2.85 ಲಕ್ಷ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವ ನೀರು ಮುಂದಿನ 48 ಗಂಟೆಗಳಲ್ಲಿ ಸೊನ್ನ ಭೀಮಾ ಬ್ಯಾರೇಜ್ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ವಾಡಿ ಸಮೀಪದ ಗ್ರಾಮಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ಹಾಗೂ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ ತಾಲ್ಲೂಕುಗಳಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್) ಹಾಗೂ ಅಗ್ನಿಶಾಮಕ ತಂಡಗಳು ಬೀಡುಬಿಟ್ಟಿವೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುತ್ತಿವೆ. ಜಿಲ್ಲೆಯ 88 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, ಒಟ್ಟಾರೆ 37 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೆ ಕಲಬುರಗಿ ಜಿಲ್ಲೆಯಲ್ಲಿ 5,785 ಜನರನ್ನು ಸುರಕ್ಷಿತ ನೆಲೆಗಳಿಗೆ ಸ್ಥಳಾಂತರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಚಿತ್ತಾಪುರ ತಾಲ್ಲೂಕಿನ ನೆರೆ ಪೀಡಿತ ಗ್ರಾಮಗಳಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸಂತ್ರಸ್ತರ ಅಳಲು ಆಲಿಸಿದರು.
ಬೀದರ್ ಜಿಲ್ಲೆಯಲ್ಲಿ ಮಳೆ ಬಿಡುವು ಕೊಟ್ಟಿದ್ದು, ಜನ ನಿಟ್ಟುಸಿರು ಬಿಟ್ಟರು. ಆದರೆ, ಮಹಾರಾಷ್ಟ್ರದ ಜಲಾಶಯಗಳಿಂದ ಈಗಲೂ ನೀರು ಹರಿಸುತ್ತಿರುವುದರಿಂದ ಭಾಲ್ಕಿ, ಕಮಲನಗರ, ಹುಲಸೂರ, ಔರಾದ್ ಹಾಗೂ ಬೀದರ್ ತಾಲ್ಲೂಕಿನಲ್ಲಿ ಮಾಂಜ್ರಾ ನದಿಗೆ ಹೊಂದಿಕೊಂಡಿರುವ ಹಲವು ಗ್ರಾಮಗಳ ಸಂಪರ್ಕ ಈಗಲೂ ಕಡಿತಗೊಂಡಿದೆ. ಜಮೀನುಗಳು ಜಲಾವೃತಗೊಂಡಿವೆ.
ಭೀಮಾ ನದಿಯು ಉಕ್ಕಿ ಹರಿದು ಕೃಷ್ಣಾ ನದಿ ಸೇರುತ್ತಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ಮೇಲಿನ ಸಂಪರ್ಕ ಕಡಿತಗೊಂಡಿದೆ. ಗುರ್ಜಾಪುರ ಹಾಗೂ ಕಾಡ್ಲೂರು ಸುತ್ತಮುತ್ತಲಿನ 20 ಗ್ರಾಮಗಳ ಸಾರಿಗೆ ಸಂಪರ್ಕ ಕಡಿದು ಹೋಗಿದೆ.
ಕೃಷ್ಣೆಯ ಪ್ರವಾಹದಲ್ಲಿ ಮೊಸಳೆಗಳು ತೇಲಿಕೊಂಡು ಬಂದು ಭತ್ತದ ಗದ್ದೆಗಳಿಗೆ ನುಗ್ಗುತ್ತಿವೆ. ಮಾನ್ವಿ ಮುಷ್ಟೂರು ಹಳ್ಳದ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಸಂಪರ್ಕ ಕಡಿತವಾಗಿದ್ದ ಕೆಲ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಸನ್ನತಿ ಹಾಗೂ ಯಾದಗಿರಿ ಬ್ಯಾರೇಜ್‌ನ ಒಳ ಹಾಗೂ ಹೊರ ಹರಿವಿನ ಪ್ರಮಾಣ 4.75 ಲಕ್ಷ ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಯಾದಗಿರಿ ಸಮೀಪದ ದೊಡ್ಡ ಹಳ್ಳ ಸೇತುವೆ, ನಾಯ್ಕಲ್ ಸಮೀಪದ ಯಾದಗಿರಿ– ಶಹಾಪುರ ರಸ್ತೆಯಲ್ಲಿ ಸೋಮವಾರ ಸಂಜೆಯಿಂದಲೇ ವಾಹನ ಸಂಚಾರ ಆರಂಭವಾಗಿದೆ.
ತಳಕ ಮತ್ತು ಅರ್ಜುಣಗಿಯಲ್ಲಿ ಹೊಸದಾಗಿ ಕಾಳಜಿ ಕೇಂದ್ರಗಳನ್ನು ತೆರೆದು 130 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಪ್ರವಾಹ ಪೀಡಿತ ಒಟ್ಟು 7 ಗ್ರಾಮಗಳ 1,490 ಜನರು ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಯಾದಗಿರಿ ನಗರದ 30 ಜನರನ್ನು ಸುರಕ್ಷತಾ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
ಯಾದಗಿರಿ ನಗರ, ಸುತ್ತಲಿನ ಗ್ರಾಮಗಳು, ಸುರಪುರ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಉಕ್ಕಿ ಹರಿದ ಭೀಮಾ, ಮಾಂಜ್ರಾ ನದಿ ಹಾವು, ಚೇಳುಗಳಂತಹ ವಿಷ ಜಂತುಗಳ ಭೀತಿ ಜಲಾವೃತ ಗ್ರಾಮದಿಂದ ಸುರಕ್ಷಿತ ಸ್ಥಳಕ್ಕೆ ಸಂತ್ರಸ್ತರ ಸ್ಥಳಾಂತರ
ಸಿ.ಎಂ ವೈಮಾನಿಕ ಸಮೀಕ್ಷೆ ಇಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಇದೇ 30ರಂದು ಬೆಳಿಗ್ಗೆ 10.40ಕ್ಕೆ ಕಲಬುರಗಿಗೆ ಬರಲಿದ್ದು ಪ್ರವಾಹ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಬಳಿಕ ಮಧ್ಯಾಹ್ನ 12.30ರಿಂದ ಮಧ್ಯಾಹ್ನ 1.30ರವರೆಗೆ ಜಿಲ್ಲೆ ಸೇರಿದಂತೆ ಮಳೆ ಹಾನಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವರು. ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಲಬುರಗಿ ಬೀದರ್ ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಮಳೆಹಾನಿ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಕಾಳಜಿ ಕೇಂದ್ರದಲ್ಲಿ ವೃದ್ಧ ಸಾವು
ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಕಾಳಜಿ ಕೇಂದ್ರದಲ್ಲಿ ಶಿವನೂರ ಗ್ರಾಮದ ನೆರೆ ಸಂತ್ರಸ್ತ ಗ್ರಾಮದ ಹಣಮಂತರಾಯ ಸಿದ್ದಪ್ಪ (75) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಸಿದ್ದಪ್ಪ ಅವರು ದಮ್ಮು ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ ಮಾತ್ರ ಇದ್ದು ಗ್ರಾಮಸ್ಥರೇ ಅಂತ್ಯ ಸಂಸ್ಕಾರ ಮಾಡಿದರು.
ನೆರೆ ಹಾವಳಿ ವೀಕ್ಷಿಸಿದ ಬಿಜೆಪಿ ನಿಯೋಗ
ಬೀದರ್: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೇಲ್ಮನೆಯ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗವು ಸೋಮವಾರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿತು. ಬೀದರ್ ಕಮಲನಗರ ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಪ್ರವಾಹದಿಂದ ಆಗಿರುವ ಸಮಸ್ಯೆಯನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ವಿಜಯೇಂದ್ರ ‘ಎನ್‌ಡಿಆರ್‌ಎಫ್ ನಿಧಿಯಿಂದ ಪರಿಹಾರ ಎಷ್ಟು ಬರಬೇಕೋ ಅಷ್ಟು ಬಂದೇ ಬರುತ್ತದೆ. ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರವನ್ನು ತಕ್ಷಣ ಕೊಡಬೇಕು’ ಎಂದು ಒತ್ತಾಯಿಸಿದರು. ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಟ್ಟಾಗಲೆಲ್ಲಾ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಮಸ್ಯೆ ತಲೆದೋರುತ್ತದೆ. ಶಾಶ್ವತ ಪರಿಹಾರಕ್ಕೆ ಸರ್ಕಾರ ಚಿಂತನೆ ನಡೆಸಬೇಕು. ಕಂದಾಯ ಕೃಷಿ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ರೈತರ ಸಮಸ್ಯೆ ಆಲಿಸಬೇಕು’ ಎಂದು ಆಗ್ರಹಿಸಿದರು. ನಂತರ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರ ಸಮೀಪದ ಭೀಮಾ ಪ್ರವಾಹವನ್ನು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.