ADVERTISEMENT

6.3 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಅಶೋಕ

12,700 ಮನೆಗಳ ಕುಸಿತ– ಕಂದಾಯ ಸಚಿವ ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 3:21 IST
Last Updated 23 ಅಕ್ಟೋಬರ್ 2020, 3:21 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಅಕ್ಟೋಬರ್‌ ತಿಂಗಳಿನಲ್ಲಿ ಉಂಟಾದ ಪ್ರವಾಹದಿಂದ ರಾಜ್ಯದಲ್ಲಿ 6.5 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ
ಬೆಳೆಹಾನಿ ಸಂಭವಿ ಸಿದ್ದು, 12,700 ಮನೆಗಳು ಕುಸಿದಿವೆ ಎಂಬ ಮಾಹಿತಿ ಪ್ರಾಥಮಿಕ ವರದಿಗಳಿಂದ ಲಭಿಸಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಗುರುವಾರ ವಿಡಿಯೊ ಕಾನ್ಫರೆನ್ಸ್‌ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 14 ಜಿಲ್ಲೆಗಳಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ 245ರಷ್ಟು ಹೆಚ್ಚಿನ ಮಳೆ ಬಿದ್ದಿದೆ. ಪ್ರವಾಹದಿಂದ 10 ಜನರು ಮೃತಪಟ್ಟಿದ್ದಾರೆ. 993 ಜಾನುವಾರುಗಳ ಸಾವು ಸಂಭವಿಸಿದೆ’ ಎಂದರು.

‘14 ತಾಲ್ಲೂಕುಗಳ 247 ಗ್ರಾಮಗ ಳನ್ನು ಪ್ರವಾಹ ಪೀಡಿತ ಗ್ರಾಮಗಳೆಂದು ಘೋಷಿಸಲಾಗಿದೆ’ ಎಂದರು.

ADVERTISEMENT

₹ 666.50 ಕೋಟಿ ಅನುದಾನ ಲಭ್ಯ: ರಾಜ್ಯದ 30 ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹ 666.50 ಕೋಟಿ ಅನುದಾನ ಲಭ್ಯವಿದೆ. ಪ್ರವಾಹ ಪರಿಸ್ಥಿತಿ ಎದುರಿ ಸುವುದಕ್ಕಾಗಿ ಆಗಸ್ಟ್‌ನಿಂದ ಈವರೆಗೆ ವಿವಿಧ ಜಿಲ್ಲೆಗಳಿಗೆ ₹ 127.93 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅಶೋಕ ತಿಳಿಸಿದರು.

ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್‌) ಪ್ರವಾಹ ಪರಿಹಾರಕ್ಕಾಗಿ ₹ 162.92 ಕೋಟಿ ಮತ್ತು ಅಗ್ನಿಶಾಮಕ ಇಲಾಖೆಯ ಬಳಕೆಗೆ ರಕ್ಷಣಾ ಸಾಮಗ್ರಿಗಳ ಖರೀದಿಗಾಗಿ₹ 20.09 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

‘ನಾನೇ ಖುದ್ದಾಗಿ ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಿದ್ದೇನೆ. ವಿರೋಧ ಪಕ್ಷಗಳ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಕೇಂದ್ರದ ಪೂರ್ಣ ಬೆಂಬಲ:

‘ನೈಸರ್ಗಿಕ ವಿಕೋಪಗಳನ್ನು ಎದುರಿಸುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಬೆಂಬಲಕ್ಕೆ ನಿಂತಿದೆ. ಈ ವಿಚಾರದಲ್ಲಿ ವಿಪಕ್ಷಗಳು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ 2008–09ರಿಂದ 2013–14ರವರೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ಅಡಿಯಲ್ಲಿ ₹ 2,669 ಕೋಟಿ ಮತ್ತು ಎಸ್‌ಡಿಆರ್‌ಎಫ್‌ ಅಡಿ ₹ 724 ಕೋಟಿ ಅನುದಾನ ನೀಡಲಾಗಿತ್ತು. ಎನ್‌ಡಿಎ ಸರ್ಕಾರ ಬಂದ ಬಳಿಕ 2014–15ರಿಂದ 2019–20ರವರೆಗೆ ಎನ್‌ಡಿಆರ್‌ಎಫ್‌ ಅಡಿ ₹ 9,279 ಕೋಟಿ ಮತ್ತು ಎಸ್‌ಡಿಆರ್‌ಎಫ್‌ ಅಡಿ ₹ 1,332 ಕೋಟಿ ಅನುದಾನ ನೀಡಲಾಗಿದೆ’ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.