ADVERTISEMENT

ಸಂತ್ರಸ್ತರಿಗೆ ಪ್ರವಾಹದ ನೀರೇ ಗತಿ!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 3:20 IST
Last Updated 23 ಅಕ್ಟೋಬರ್ 2020, 3:20 IST
ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮದಲ್ಲಿ ಪ್ರವಾಹದ ರಾಡಿಮಿಶ್ರಿತ ನೀರನ್ನೇ ಬಳಕೆಗಾಗಿ ಗ್ರಾಮಸ್ಥರು ಹೊತ್ತೊಯ್ಯುತ್ತಿರುವುದು
ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮದಲ್ಲಿ ಪ್ರವಾಹದ ರಾಡಿಮಿಶ್ರಿತ ನೀರನ್ನೇ ಬಳಕೆಗಾಗಿ ಗ್ರಾಮಸ್ಥರು ಹೊತ್ತೊಯ್ಯುತ್ತಿರುವುದು   

ಕಲಬುರ್ಗಿ: ಭೀಮಾ ನದಿಯ ಪ್ರವಾಹ ಜಿಲ್ಲೆಯಲ್ಲಿ ಇಳಿಮುಖವಾಗಿದ್ದು, ಮನೆಗಳನ್ನು ಆವರಿಸಿಕೊಂಡಿದ್ದ ನೀರು ಕಡಿಮೆಯಾಗಿದೆ. ಹೀಗಾಗಿ ಕಾಳಜಿ ಕೇಂದ್ರಗಳಲ್ಲಿದ್ದ ಸಹಸ್ರಾರು ಜನರು ಬದುಕು ಕಟ್ಟಿಕೊಳ್ಳಲು ಮನೆಯತ್ತ ತೆರಳುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಇನ್ನೂ ಹಲವು ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸದೇ ಇರುವುದರಿಂದ ಪ್ರವಾಹದ ನೀರನ್ನೇ ಕುಡಿಯಬೇಕಾಗಿದೆ.

ಜೊತೆಗೆ, ರಾಡಿ, ಕೊಳೆ ಗ್ರಾಮದ ರಸ್ತೆಗಳಲ್ಲಿ ಬಿದ್ದಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ. ಚಿತ್ತಾಪುರ ತಾಲ್ಲೂಕಿನಲ್ಲಿ ಕುಡಿಯಲು ಶುದ್ಧ ನೀರು ಪೂರೈಕೆ ಆಗದೇ ಇರುವುದರಿಂದ ಸಂತ್ರಸ್ತರುಪರದಾಡುತ್ತಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿಯೂ ಭೀಮಾ ನದಿ ಪ್ರವಾಹ ಇಳಿಕೆಯಾಗಿದೆ. ನಾಯ್ಕಲ್ ರಸ್ತೆ ಅಕ್ಕಪಕ್ಕದಲ್ಲಿ ಸತ್ತ ಮೀನುಗಳ ದುರ್ವಾಸನೆಯಿಂದ ನಿವಾಸಿಗಳುತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಕುಮನೂರ–ಅರ್ಜುಣಗಿ ರಸ್ತೆಯ ಬದಿಯ ತಗ್ಗಿನಲ್ಲಿಯ ನೀರಿನಲ್ಲಿ ಹಾಗೂ ಕುಮನೂರ ಗ್ರಾಮದ ತಿಪ್ಪೆಗುಂಡಿಯಲ್ಲಿ ಎರಡು ಸಣ್ಣಗಾತ್ರದ ಮೊಸಳೆ ಕಂಡು ಬಂದಿವೆ. ಅವುಗಳನ್ನುಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜೋರು ಮಳೆ (ಶಿವಮೊಗ್ಗ ವರದಿ): ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮಳೆ ಶುರುವಾಗಿದೆ. ಬುಧವಾರ ರಾತ್ರಿಯೂ
ಹಲವೆಡೆ ಮಳೆಯಾಗಿದೆ. ಮೆಕ್ಕೆಜೋಳ ಕೊಯ್ಲಿಗೆ ಮಳೆಯಿಂದ ತೊಂದರೆಯಾಗು ತ್ತಿದ್ದು, ರೈತರು ಚಿಂತೆಗೀಡಾಗಿದ್ದಾರೆ.

ಸಿಡಿಲು ಬಡಿದು 3 ಜಾನುವಾರು ಸಾವು: ಅರಸೀಕೆರೆ ಹೋಬಳಿಯ ರಾಮಘಟ್ಟ ದೊಡ್ಡ ತಾಂಡಾದಲ್ಲಿ ಗುರುವಾರ ಸಿಡಿಲು ಬಡಿದು ಕುರಿ, ಎಮ್ಮೆ ಹಾಗೂ ಕರು ಮೃತಪಟ್ಟಿದ್ದು, ರೈತ ಲೋಕ್ಯ ನಾಯ್ಕ ಗಾಯಗೊಂಡಿದ್ದಾರೆ.

ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಬಿರುಸಿನ ಮಳೆಯಾಗಿದೆ.

ತುಂತುರು ಮಳೆ: ಬಳ್ಳಾರಿ ಜಿಲ್ಲೆಯ ವಿವಿಧೆಡೆ ತುಂತುರು ಮಳೆ ಸುರಿದಿದೆ. ಹೂವಿನಹಡಗಲಿ ತಾಲ್ಲೂಕಿನ ಹಗರನೂರು ಕೆರೆ ಭರ್ತಿಯಾಗಿದ್ದು, ಹಿನ್ನೀರಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.