ADVERTISEMENT

ನದಿಪಾತ್ರಗಳಲ್ಲಿ ಪ್ರವಾಹ ಭೀತಿ: ಬೆಳಗಾವಿ ಜಿಲ್ಲೆಯಲ್ಲಿ 10 ಸೇತುವೆ ಮುಳುಗಡೆ

ಆಲಮಟ್ಟಿ, ಭದ್ರಾದಿಂದ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 22:01 IST
Last Updated 20 ಜುಲೈ 2024, 22:01 IST
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಎಲ್ಲಾ 26 ಗೇಟ್‌ ಶನಿವಾರ ತೆರೆದು ಒಂದು ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಯಿತು  
–ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ 
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಎಲ್ಲಾ 26 ಗೇಟ್‌ ಶನಿವಾರ ತೆರೆದು ಒಂದು ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಯಿತು   –ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ    

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ಮಳೆಯ ಅಬ್ಬರ ತುಸು ತಗ್ಗಿದೆ. ಆದರೆ, ಬಹುತೇಕ ಅಣೆಕಟ್ಟೆಗಳು ಭರ್ತಿಯಾ‌ಗುವ ಹಂತಕ್ಕೆ ಬಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಗೆ ಬಿಡುತ್ತಿರುವ ಕಾರಣ ಪ್ರಮುಖ ನದಿಗಳ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. 

ವಿಜಯಪುರ ಜಿಲ್ಲೆಯ ಆಲಮಟ್ಟಿ ಹಾಗೂ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರವೇ ನೀರು ಹೊರಗೆ ಹರಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಣೆಕಟ್ಟೆಗೆ ನೀರಿನ ಹರಿವು ಹೆಚ್ಚಿದ್ದು, ನೀರಿನ ಮಟ್ಟ ಒಂದೇ ದಿನ ಐದು ಅಡಿ ಏರಿದೆ. 

ಉಡುಪಿ ಜಿಲ್ಲೆಯಲ್ಲಿ ಹೊಳೆ ದಾಟುವಾಗ ಗುರುವಾರ ಕೊಚ್ಚಿಹೋಗಿದ್ದ ವ್ಯಕ್ತಿಯ ಶವ ಶುಕ್ರವಾರ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿಯಲ್ಲಿ ಶುಕ್ರವಾರ ಮನೆಗೋಡೆ ಕುಸಿದು ನಾಲ್ವರು ಗಾಯಗೊಂಡರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗಳೂರು– ಶೃಂಗೇರಿ ಹೆದ್ದಾರಿಯಲ್ಲಿ ತಡೆಗೋಡೆ ಕುಸಿದು, ಸಂಚಾರ ಅಸ್ತವ್ಯಸ್ತವಾಗಿತ್ತು.

ADVERTISEMENT

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಎಲ್ಲ 26 ಗೇಟ್‌ಗಳನ್ನು ತೆರೆದು ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು, ನದಿ ಪಾತ್ರಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. 519.6 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಸದ್ಯ 518 ಅಡಿ ನೀರಿದೆ.  

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ  ಯಮಕನಮರಡಿ, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ ಭಾಗದಲ್ಲಿ 10 ಸೇತುವೆಗಳು ಮುಳುಗಿವೆ. ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹುಕ್ಕೇರಿ ತಾಲ್ಲೂಕಿನ ದಡ್ಡಿ, ಸಲಾಮವಾಡಿ, ಮೊದಗಾ, ಶೆಟ್ಟಿಹಳ್ಳಿ ಗ್ರಾಮ ಬಳಿ ಸೇತುವೆಗಳು ಮುಳುಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ.

ನಿಪ್ಪಾಣಿ ತಾಲ್ಲೂಕಿನಲ್ಲಿ ಕಾರದಗಾ– ಭೋಜ, ಭೋಜವಾಡಿ– ಕುನ್ನೂರ, ಸಿದ್ನಾಳ– ಅಕ್ಕೋಳ, ಜತ್ರಾಟ– ಭೀವಶಿ ಸೇತುವೆಗಳು ಜಲಾವೃತಗೊಂಡಿವೆ.  

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ವೇದಗಂಗಾ– ದೂಧಗಂಗಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದುಬದುತ್ತಿದೆ.

ಇನ್ನೊಂದೆಡೆ ಗೋಕಾಕ ಬಳಿಯ ಶಿಂಗಳಾಪುರ ಸೇತುವೆ, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಸೇತುವೆ ಕೂಡಾ ಮುಳುಗಿದ್ದು, ಎರಡು ದಿನಗಳಿಂದ ಸಂಚಾರ ಬಂದ್‌ ಆಗಿವೆ.

ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆ ತುಸು ವಿರಾಮ ನೀಡಿದ್ದರೂ, ಮಳೆಯ ಪರಿಣಾಮ ಮುಂದುವರಿದಿದೆ. ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ 13, ಹಾಸನ ಜಿಲ್ಲೆಯಲ್ಲಿ 135 ಮನೆಗಳಿಗೆ ಹಾನಿಯಾಗಿದೆ.

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಒಳಹರಿವು 40 ಸಾವಿರ ಕ್ಯುಸೆಕ್‌ಗೆ ಏರಿದ್ದು, ಜಲಾಶಯದಿಂದ 12 ಸಾವಿರ ಕ್ಯುಸೆಕ್‌ ನೀರನ್ನು ನದಿ, ನಾಲೆಗಳಿಗೆ ಹರಿಸಲಾಗುತ್ತಿದೆ.

ಧಾರಾಕಾರ ಮಳೆ ಹಿಂದೆಯೇ, ಕರಾವಳಿ ಭಾಗದಲ್ಲಿ ಕಡಲ್ಕೊರೆತ ಹೆಚ್ಚಿದೆ. ಉಡುಪಿ ಜಿಲ್ಲೆ ಪಡುಬಿದ್ರಿಯ ನಡಿಪಟ್ಣದಲ್ಲಿ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದ್ದು, ಅಪಾಯದ ಭೀತಿಯಲ್ಲಿದ್ದ ಮೀನುಗಾರಿಕಾ ಶೆಡ್‌ಗೆ ಭಾಗಶಃ ಹಾನಿಯಾಗಿದೆ.

ಆಲಮಟ್ಟಿ ಜಲಾಶಯದ ಎಲ್ಲಾ 26 ಗೇಟ್‌ ಶನಿವಾರ ತೆರೆದು ಒಂದು ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಬಿಡಲಾಗಿದೆ    –ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ 

ಮಾಸ್ತಿಕಟ್ಟೆ: 16.7 ಸೆಂ.ಮೀ ಮಳೆ

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 16.7 ಸೆಂ.ಮೀ ಮಳೆ ಸುರಿದಿದೆ.  ಅಲ್ಲದೆ ಹುಲಿಕಲ್‌ನಲ್ಲಿ 14.9 ಸೆಂ.ಮೀ ಸಾವೇಹಕ್ಲುವಿನಲ್ಲಿ 14 ಸೆಂ.ಮೀ ಚಕ್ರಾದಲ್ಲಿ 12.5 ಸೆಂ.ಮೀ ಮಾಣಿಯಲ್ಲಿ 10.8 ಸೆಂ.ಮೀ ಯಡೂರಿನಲ್ಲಿ 10.5 ಸೆಂ.ಮೀ ಮಳೆ ಸುರಿದಿರುವುದು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.