ADVERTISEMENT

ಹೂವು ಮಾರಾಟಕ್ಕೆ ಸುಧಾಕರ್‌ ಅಡ್ಡಿ: ಹೈಕೋರ್ಟ್‌ ಚಾಟಿ

ಸರ್ಕಾರದ ವಿವರಣೆ ಕೇಳಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 16:19 IST
Last Updated 1 ಫೆಬ್ರುವರಿ 2022, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಕೊರೊನಾ ನೆಪದಲ್ಲಿ ಹೂವು ಬೆಳೆಗಾರರಿಗೆ ಹೂವು ಮಾರಾಟಕ್ಕೆ ಅನುಮತಿ ನೀಡದೆ ಅಡ್ಡಿಪಡಿಸಲಾಗುತ್ತಿದೆ’ ಎಂದು ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

‌ಈ ಕುರಿತಂತೆ ಚಿಕ್ಕಬಳ್ಳಾಪುರ ತಿರುಮಲ ಫ್ಲವರ್‌ ಸ್ಟಾಲ್‌ ಮಾಲೀಕ ಜಿ.ಎಂ.ಶ್ರೀಧರ ಹಾಗೂ ಕರಿಗನಪಾಳ್ಯದ ರಮೇಶ್‌ ರೆಡ್ಡಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‌, ‘ಕೊರೊನಾ ಕಾರಣಕ್ಕಾಗಿ ಎರಡು ವರ್ಷಗಳಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಹೂವು ಮಾರಾಟಗಾರರಿಗೆ ನಿರ್ಬಂಧ ಹೇರಲಾಗಿತ್ತು. ಈಗ ನಿರ್ಬಂಧ ಸಡಿಲಿಕೆಯಾಗಿದ್ದರೂ ಸ್ಥಳೀಯ ಶಾಸಕ (ಆರೋಗ್ಯ ಸಚಿವ) ಡಾ.ಕೆ.ಸುಧಾಕರ ಅವರ ರಾಜಕೀಯ ಒತ್ತಡದಿಂದಾಗಿ ಇನ್ನೂ ಮಾರಾಟಕ್ಕೆ ಅನುಮತಿ ನೀಡದೆ ಸತಾಯಿಸಲಾಗುತ್ತಿದೆ‘ ಎಂದು ಆಕ್ಷೇಪಿಸಿದರು.

ADVERTISEMENT

ಈ ಬಗ್ಗೆ ಸರ್ಕಾರಿ ವಕೀಲರು ವಿವ ರಣೆ ನೀಡುವಂತೆ ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಒಂದು ವಾರ ಮುಂದೂಡಿತು. ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಎಪಿಎಂಸಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಚಿಕ್ಕಬಳ್ಳಾಪುರ ಎಪಿಎಂಸಿ ಕಾರ್ಯದರ್ಶಿ ಹಕೀಂ, ಜಿಲ್ಲಾಧಿಕಾರಿ ಹಾಗೂ ಎಸ್‌ಪಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.