ADVERTISEMENT

ವಿಜಯಪುರ: ಜಾಲತಾಣದಲ್ಲಿ ಜಾನಪದ ಸಮ್ಮೇಳನ

ಕನ್ನಡ ಜಾನಪದ ಪರಿಷತ್‌ನಿಂದ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 12:36 IST
Last Updated 25 ಜುಲೈ 2020, 12:36 IST
ರಾಷ್ಟ್ರೀಯ ಜಾಲತಾಣದಲ್ಲಿ ಜಾನಪದ ಸಮ್ಮೇಳನದ ಲೊಗೊ
ರಾಷ್ಟ್ರೀಯ ಜಾಲತಾಣದಲ್ಲಿ ಜಾನಪದ ಸಮ್ಮೇಳನದ ಲೊಗೊ   

ವಿಜಯಪುರ: ಕೋವಿಡ್‌ ಸಂಕಷ್ಟದ ಸಮಯದಲ್ಲೂ ಕನ್ನಡ ಜಾನಪದ ಪರಿಷತ್ ಜಾಲತಾಣದಲ್ಲಿ ನಿರಂತರವಾಗಿ ಜಾನಪದ ಸಾಹಿತ್ಯಕ್ಕೆ ಪೂರಕವಾದ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಡಿನ ಗಮನ ಸೆಳೆದಿದೆ.

ಮಾರ್ಚ್‌ 16ಕ್ಕೆ ಜಾಲತಾಣದಲ್ಲಿ ಆರಂಭವಾದ ಜಾನಪದ ಉಪನ್ಯಾಸ ಕಾರ್ಯಕ್ರಮಗಳು ಜುಲೈ 24ಕ್ಕೆ ಶತಕ ಪೂರೈಸಿದ್ದು, ಇದರ ಸವಿವ ನೆನಪಿಗಾಗಿ ಜುಲೈ 26ರಂದು ರಾಷ್ಟ್ರಮಟ್ಟದ ಪ್ರಥಮ ‘ಜಾಲತಾಣದಲ್ಲಿ ಜಾನಪದ ಸಮ್ಮೇಳನ’ ಆಯೋಜಿಸಿದೆ.

ಕನ್ನಡ ಜಾನಪದ ಪರಿಷತ್, ಜಾನಪದ ಯುವ ಬ್ರಿಗೇಡ್, ವಿಜಯಪುರ ಜಿಲ್ಲಾ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸಮ್ಮೇಳನ ಉದ್ಘಾಟಿಸುವರು ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಾಳನಗೌಡ ಪಾಟೀಲ(ಪಡಗಾನೂರ) ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರು ಅವರು ಗದುಗಿನಲ್ಲಿ ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ಮಾಡಲಿದ್ದಾರೆ. ನಂತರ ವಿಜಯಪುರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಸಿದ್ರಾಮಯ್ಯ ಪೂಜಾರಿ, ವಿದ್ವಾಂಸರಾದ ಅಂಬಳಿಕೆ ಹಿರಿಯಣ್ಣ ಮತ್ತು ಸೋಮಶೇಖರ ಇಮ್ರಾಪೂರ ಅವರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.

ಡಾ. ರಂಗಾರೆಡ್ಡಿ ಕೋಡಿರಾಂಪೂರ ಬೆಂಗಳೂರಿನಲ್ಲಿ ಕೃತಿ ಬಿಡುಗಡೆ ಮಾಡುವರು. ಕೆ.ವಿ. ಖಾದ್ರಿ ನರಸಿಂಹಯ್ಯ, ಡಾ. ನಂಜಯ್ಯ ಹೊಂಗನೂರು, ಡಾ.ಚೆಲುವರಾಜು ಅಮರಯ್ಯ ಸ್ವಾಮಿ ಜಾಲಿಬೆಂಟಿ, ಡಾ.ಎಂ.ಎನ್. ವೆಂಕಟೇಶ ಡಾ.ಮೀರಸಾಬಿಹಳ್ಳಿ ಶಿವಣ್ಣ, ಡಾ.ವೈ.ಎಂ. ಭಜಂತ್ರಿ, ಕಾ ಕವಿತಾ ಕೃಷ್ಣ ಅತಿಥಿ ಭಾಷಣ ಮಾಡುವರು.

ಕನ್ನಡ ಜಾನಪದ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಬೆಂಗಳೂರಿನಲ್ಲಿ ಅಧ್ಯಕ್ಷ ಭಾಷಣ ಮತ್ತು ಸಾನಿಧ್ಯ ವಹಿಸಿರುವ ಇಂಗಳೇಶ್ವರ ಸಿದ್ಧಲಿಂಗ ಸ್ವಾಮೀಜಿ ಅವರು ರಾಯಚೂರಿನಲ್ಲಿ ಆರ್ಶೀವಚನ ನೀಡುವರು.

ಮಧ್ಯಾಹ್ನ 1.30ಕ್ಕೆ ನಡೆಯುವ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ಪ್ರೊ.ಕೆ.ಎಸ್. ಕೌಜಲಗಿ ವಹಿಸಲಿದ್ದು, ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ‘ಜನಪದ ಸಾಹಿತ್ಯದಲ್ಲಿ ಮಹಿಳೆ’, ಡಾ.ಜಿ.ಎಸ್.ದಬಾಲೆ ‘ತತ್ವಪದಗಳ ಪರಂಪರೆ’, ಡಾ.ವಿ.ಎಸ್. ಮಾಳಿ ಜಾನಪದ ತ್ರಿಪದಿಯಲ್ಲಿ ಜೀವನ ಮೌಲ್ಯ ಕುರಿತು ವಿವಿಧ ಸ್ಥಳಗಳಲ್ಲಿ ಮಾತನಾಡಲಿದ್ದಾರೆ.

ಮಧ್ಯಾಹ್ನ 2.5ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಡಾ. ಆನಂದಪ್ಪ ಜೋಗಿ ಅಧ್ಯಕ್ಷತೆ ವಹಿಸಲಿದ್ದು, ಡಾ. ರಂಗಸ್ವಾಮಿ ‘ಜನಪದ ಗೀತೆಗಳ ವಿಭಿನ್ನ ನೆಲೆಗಳು’, ಡಾ. ರತ್ನಾಕರ ಮಲ್ಲಮೂಲೆ ‘ಮಾತೃಪ್ರಧಾನ ಸಂಸ್ಕೃತಿ ಮತ್ತು ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ ‘ತುಮಕೂರ ಜಿಲ್ಲೆ ಜಾನಪದ’ ಕುರಿತು ಮಾತನಾಡಲಿದ್ದಾರೆ.

ಸಂಜೆ 4 ಕ್ಕೆ ನಡೆಯುವ ಮೂರನೇ ಗೋಷ್ಠಿಯಲ್ಲಿ ಡಾ.ಕಾವೇರಿ ಪ್ರಕಾಶ ಅಧ್ಯಕ್ಷತೆ ವಹಿಸಲಿದ್ದು, ಡಾ. ಜಯಲಲಿತಾ ‘ದಕ್ಷಿಣ ಭಾರತದ ಜಾನಪದ’, ಡಾ. ಭಾರತಿ ಮರವಂತೆ ’ಜಾನಪದ ಚಿತ್ತಾರಗಳಲ್ಲಿ ರಂಗೋಲಿ’, ಪ್ರೊ.ಶಕುಂತಲಾ ಸಿಂಧೂರ ‘ಕೃಷಿ ಉಪಕರಣ’ ಕುರಿತು ಮಾತನಾಡಲಿದ್ದಾರೆ.

ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಡಾ.ಎಸ್. ಬಾಲಾಜಿ ಅಧ್ಯಕ್ಷತೆಯಲ್ಲಿ ಡಾ.ಅಪ್ಪಗೆರೆ ತಿಮ್ಮರಾಜು ಸಮಾರೋಪ ಭಾಷಣ ಮಾಡಲಿದ್ದಾರೆ. ಡಾ. ಕನಕತಾರಾ, ಸೌಮ್ಯ ಟಿಕೆಗೌಡ ಅತಿಥಿಗಳಾಗಿ ಭಾಗವಹಿಸುವರು.

ರಾಜ್ಯದ 30 ಜಿಲ್ಲೆಗಳಲ್ಲಿ 30 ಜನ ಜಾನಪದ ಕಲಾವಿದರ ಸನ್ಮಾನ ಆಯಾ ಜಿಲ್ಲೆಯಲ್ಲಿ ನಡೆಯಲಿದೆ.

ಸಮ್ಮೇಳನದಲ್ಲಿ ವಿಜಯಪುರ ಜಿಲ್ಲೆಯ ಇಂಡಿಯ ಗೊಂದಳಿ ಪದ, ಜೈನಾಪುರದ ಹೆಜ್ಜೆಮೇಳ, ಪ್ರಕಾಶ ಚಲವಾದಿಯವರ ಶಹನಾಯ್‌ ವಾದನ, ಸಾಲೋಟಗಿಯ ಹಂತಿಪದ, ಬಾಗಲಕೋಟೆಯ ಕೆರೂರಿನ ಮಹಿಳಾ ಡೊಳ್ಳು, ಚಾಮರಾಜನಗರದ ಮಹಾಕಾವ್ಯ ಗಾಯನ, ಚಿತ್ರದುರ್ಗದ ಜೋಗಿಪದಗಳ ಕಲಾ ಪ್ರದರ್ಶನ ನಡೆಯಲಿದೆ.

ಈ ಸಮ್ಮೇಳನದಲ್ಲಿ ಕನ್ನಡ ಜಾನಪದ ಪರಿಷತ್ತಿನ 30 ಜಿಲ್ಲಾ ಘಟಕದ ಅಧ್ಯಕ್ಷರು, ಜಾನಪದ ಬ್ರಿಗೇಡ್‍ನ 30 ಜಿಲ್ಲಾ ಸಂಚಾಲಕರು, 300 ಜನ ಪರಿಷತ್‌ನ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದು, ಒಟ್ಟು ಒಂದು ಸಾವಿರ ಜನರು ಜಾಲತಾಣದಲ್ಲಿ ನಡೆಯುವ ಜಾನಪದ ಸಮ್ಮೇಳನದಲ್ಲಿ ಭಾಗವಹಿಸದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.